ಬಂಟ್ವಾಳ, ಆಗಸ್ಟ್ 31, 2025 (ಕರಾವಳಿ ಟೈಮ್ಸ್) : ದೇವರ ಮುಂದೆ ಎಲ್ಲರೂ ಸಮಾನರು. ಜಾತಿ, ವರ್ಗ ಯಾವುದರಿಂದಲೂ ಯಾರೂ ಮೇಲು ಕೀಳು ಆಗೋದಿಲ್ಲ. ಮನಸ್ಸು ಶುದ್ದ ಆದ್ರೆ ಮಾತ್ರ ಪವಿತ್ರ ಅಗ್ತಾರೆ. ಜಾತಿಯಿಂದ ಯಾರೂ ಪವಿತ್ರ ಆಗೋದಿಲ್ಲ ಎಂದು ಬಾರ್ಕೂರು ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವಿದ್ಯಾವಾಚಸ್ಪತಿ ಡಾ ವಿಶ್ವ ಸಂತೋಷ ಭಾರತಿ ಶ್ರೀಪಾದರು ಸ್ವಾಮೀಜಿ ಹೇಳಿದರು.
ರಮಾನಾಥ ರೈ ನೇತೃತ್ವದ, ಬಿ ಪದ್ಮಶೇಖರ ಜೈನ್ ಅಧ್ಯಕ್ಷತೆಯ ಜಕ್ರಿಬೆಟ್ಟು 22ನೇ ಶ್ರೀ ಗಣೇಶೋತ್ಸವದ 4ನೇ ದಿನವಾದ ಶನಿವಾರ (ಆಗಸ್ಟ್ 30) ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರವಚನಗೈದ ಅವರು, ಇನ್ನೊಂದು ಧರ್ಮವನ್ನು ಅವಹೇಳನ ಮಾಡುವುದು ಧರ್ಮ ರಕ್ಷಣೆಯಲ್ಲ ಎಂದರು.
ಗಣಪತಿ ಮೆರವಣಿಗೆಯಲ್ಲಿ ಯಾರಾದರೂ ಕುಡಿದು ಬಂದರೆ ನಿಮ್ಮ ಜೀವನವನ್ನೂ ಗಣಪತಿ ತೂರಾಡುವಂತೆ ಮಾಡ್ತಾನೆ. ಗಣಪತಿ ದೇವರ ಮೆರವಣಿಗೆ ಸಂದರ್ಭ ಕನಿಷ್ಠ ನಿಮ್ಮ ಮನೆ ಬಳಿ ರಸ್ತೆಗೆ ನೀರನ್ನಾದರೂ ಹಾಕಿ ಗುಡಿಸಿ ಅಷ್ಟು ಸಾಕು ಎಂದ ಸ್ಚಾಮೀಜಿಗಳು ನಾಗಾರಾಧನೆ, ಭೂತಾರಾಧನೆ, ಯಕ್ಷಗಾನ, ಕಂಬಳ ಎಲ್ಲವೂ ಆರಾಧನಾ ಪದ್ದತಿಯಾಗಿದೆ. ಮಹಿಶಂದಾಯನ ಆರಾಧನಾ ಪದ್ದತಿಯೆ ಕೋಣಗಳನ್ನು ಓಡಿಸುವುದು. ಈ ಕಾರಣಕ್ಕಾಗಿ ಕಂಬಳ ಕ್ರೀಡೆ ಕರಾವಳಿಯ ಆರಾಧನಾ ಪದ್ದತಿಯಾಗಿ ಬೆಳೆದು ಬಂದಿದೆ. ಅದು ಕರಾವಳಿಯಿಂದ ಮೇಲಕ್ಕೆ ಹೋಗಬಾರದು. ಅದನ್ನು ಮೈಸೂರು ದಸರಾದಲ್ಲೋ, ಬೆಂಗಳೂರಿನಲ್ಲೋ ನಡೆಸಿ ಶೋ ನಡೆಸೋದು ತರವಲ್ಲ. ಈ ಬಗ್ಗೆ ಆಡಳಿತ ನಡೆಸುವ ಮಂತ್ರಿ ಮಹಾಶಯರು ಅರ್ಥ ಮಾಡಿಕೊಂಡು ಕಂಬಳವನ್ನು ಕರಾವಳಿಯ ಆರಾಧನಾ ಪದ್ದತಿಯಾಗಿಯೇ ಉಳಿಸಿಕೊಂಡು ಹೋಗಲು ಸಹಕರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಮಾತನಾಡಿ, ಮನುಷ್ಯ ದೇವಸ್ಥಾನಗಳ ಬ್ರಹ್ಮಕಲಶ ಮಾಡುವುದರ ಜೊತೆಗೆ ತನ್ನ ಮನಸ್ಸಿಗೂ ಬ್ರಹ್ಮಕಲಶ ಮಾಡಬೇಕಾಗಿದೆ. ಮನಸ್ಸಿನ ಕಲ್ಮಶಗಳನ್ನು ತೊಳೆದು ಹಾಕದೆ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸಿದರೂ ಫಲ ಶೂನ್ಯ. ಮನಸ್ಸು ಶುದ್ದೀಕರಣ ಆದರೆ ಸಮಾಜ ಶುದ್ದಿಕರಣ ಆಗುತ್ತದೆ. ಮನುಷ್ಯನನ್ನು ಕಂಡರೆ ದ್ವೇಷ ಕಾರುವ ಮಂದಿಗೆ ಯಾವತ್ತೂ ದೇವರು ಒಲಿಯುವುದಿಲ್ಲ. ಸಮಾಜದಲ್ಲಿ ಶಾಂತ-ಸೌಹಾರ್ದತೆ ನೆಲೆ ನಿಲ್ಲಬೇಕು ಎಂಬುದೇ ನಮ್ಮ ಮೊದಲ ಆದ್ಯತೆ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿವಿ ಉಪಕುಲಪತಿ ಪ್ರೊ ಪಿ ಎಲ್ ಧರ್ಮ, ಕಡೇಶ್ವಾಲ್ಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕೆನರಾ ಬಸ್ ಮಾಲಿಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಳ್ಳಾಲ್, ದ ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಭಾಗವಹಿಸಿದ್ದರು.
ಜಕ್ರಿಬೆಟ್ಟು ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ ಪದ್ಮಶೇಖರ್ ಜೈನ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪ್ರಮುಖರಾದ ವಿಠಲ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಸುರೇಶ್ ಜೋರಾ, ಸಂಪತ್ ಕುಮಾರ್ ಶೆಟ್ಟಿ, ಚಂದ್ರಹಾಸ ಪಲ್ಲಿಪ್ಪಾಡಿ, ಜಯಂತಿ ಪೂಜಾರಿ, ಬಾಲಕೃಷ್ಣ ಆಳ್ವ, ವೆಂಕಪ್ಪ ಪೂಜಾರಿ, ಸುಧಾಕರ ಶೆಣೈ ಖಂಡಿಗ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ರಾಜೀವ್ ಕಕ್ಕೆಪದವು ಮೊದಲಾದವರು ಉಪಸ್ಥಿತರಿದ್ದರು.
ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು ಸ್ವಾಗತಿಸಿ, ವಕೀಲ ಸುರೇಶ್ ನಾವೂರು ವಂದಿಸಿದರು. ಎಚ್ ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಇಳಿಯೂರು ಶ್ರೀ ಮಹಾವಿಷ್ಣು ಭಜನಾ ಮಂಡಳಿ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.
0 comments:
Post a Comment