ಬಂಟ್ವಾಳ, ಆಗಸ್ಟ್ 14, 2025 (ಕರಾವಳಿ ಟೈಮ್ಸ್) : ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಳ್ಳಿಗುಡ್ಡೆ ಎಂಬಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಹೊಸ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣವಾಗಿದ್ದರೂ ಅದರಿಂದ ನೀರು ಸರಬರಾಜಿಗೆ ವ್ಯವಸ್ಥೆ ಮಾಡದೆ ಹಳೆಯ ಟ್ಯಾಂಕ್ ಮೂಲಕವೇ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಸಾರ್ವಜನಿಕರು ಬುಧವಾರ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ನಾವೂರು ಮಸೀದಿ ಹತ್ತಿರದ ನಿವಾಸಿ ಅಬ್ದುಲ್ ಸಮದ್ ಎಂಬವರು ಲೋಕಾಯುಕ್ತ ಎಸ್ಪಿ ಅವರಿಗೆ ಲಿಖಿತ ದೂರು ಸಲ್ಲಿಸಿದ್ದು, ಗ್ರಾಮದ ಪಳ್ಳಿಗುಡ್ಡೆ ಎಂಬಲ್ಲಿ ಸುಮಾರು 4 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ವತಿಯಿಂದ ಹೊಸ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಆದರೂ ಅದಕ್ಕೆ ನೀರು ತುಂಬಿಸಿ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸದೆ ಹಳೆಯ ಟ್ಯಾಂಕಿನಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಸದ್ರಿ ಹಳೆಯ ನೀರಿನ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು, ನೀರಿನಲ್ಲಿ ಮಣ್ಣು ಮತ್ತು ಇತರ ತ್ಯಾಜ್ಯ ಸೇರಿಕೊಂಡು ಕಲುಷಿತಗೊಂಡಿರುತ್ತದೆ. ಇದೇ ಕಲುಷಿತ ನೀರನ್ನು ಇಲ್ಲಿನ ಸಾರ್ವಜನಿಕರು ಕುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ ನಿರ್ಮಾಣವಾಗಿರುವ ಹೊಸ ಟ್ಯಾಂಕ್ ಬಗ್ಗೆ ಪ್ರಶ್ನಿಸಿದರೆ ಸಂಬಂಧಪಟ್ಟ ಇಂಜಿನಿಯರ್ ಅವರು ಸಮರ್ಪಕ ಉತ್ತರ ನೀಡದೆ ನುಣಚಿಕೊಳ್ಳುತ್ತಿದ್ದಾರೆ. ಪಂಚಾಯತ್ ಆಡಳಿತವೂ ಈ ಬಗ್ಗೆ ಯಾವುದೇ ಜವಾಬ್ದಾರಿ ಪ್ರದರ್ಶಿಸುತ್ತಿಲ್ಲ. ಯಾವುದೇ ಅಭಿವೃದ್ದಿ ಕಾರ್ಯಗಳೂ ಪಂಚಾಯತ್ ವತಿಯಿಂದ ಆಗದೆ ನಿಷ್ಕ್ರಿಯವಾಗಿದೆ. ಈ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳೂ ಸಾರ್ವಜನಿಕರ ಮನವಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ಲೋಕಾಯುಕ್ತ ಎಸ್ಪಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿರುವ ಸಮದ್ ಅವರು ಈ ಬಗ್ಗೆ ತಕ್ಷಣ ತನಿಖೆ ನಡೆಸಿ ಇಲ್ಲಿನ ಹೊಸ ಟ್ಯಾಂಕಿಗೆ ನೀರು ತುಂಬಿಸಿ ಸಾರ್ವಜನಿಕರಿಗೆ ಉತ್ತಮ ದರ್ಜೆಯ ನೀರಿನ ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

































0 comments:
Post a Comment