ಬಂಟ್ವಾಳ, ಆಗಸ್ಟ್ 11, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 24 ರ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಎಂಬಲ್ಲಿರುವ ಹಳೆಯ ಕಾಲದ ದಾದಿಯರ ಕೇಂದ್ರವೊಂದು ಇದೀಗ ಉಪಯೋಗಕ್ಕಿಲ್ಲದೆ ಭೂತ ಬಂಗಲೆಯಂತಾಗಿದ್ದು, ಇಂದೋ-ನಾಳೆಯೋ ಕುಸಿತದ ಭೀತಿ ಎದುರಿಸುತ್ತಿದೆ. ಆರೋಗ್ಯ ಇಲಾಖೆಯ ಸುಪರ್ದಿಗೆ ಒಳಪಟ್ಟಿರುವ ಇಲ್ಲಿನ ಹಳೆ ದಾದಿಯರ ಕೇಂದ್ರ ಹಿಂದಿನ ಕಾಲದಲ್ಲಿ ಇಡೀ ಊರಿನ ನಾಗರಿಕರ ಉಪಯೋಕ್ಕಿದ್ದ ಕೇಂದ್ರವಾಗಿತ್ತು. ಜನ ಆರೋಗ್ಯ ಸಂಬಂಧಿ ಸೇವೆಗಳಿಗಾಗಿ ಹಾಗೂ ಪ್ರಮುಖವಾಗಿ ಗರ್ಭಿಣಿ ಸ್ತ್ರೀಯರ ಪ್ರಸವಕ್ಕಾಗಿ ಪ್ರಸೂತಿ ಕೆಲಸಗಳು ಇದೇ ಕೇಂದ್ರದ ಸಿಬ್ಬಂದಿಗಳಿಂದ ನಡೆಯುತ್ತಿತ್ತು. ಆದರೆ ಆರೋಗ್ಯ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದ ಬಳಿಕ ಇಲ್ಲಿನ ದಾದಿಯರ ಕೇಂದ್ರ ಉಪಯೋಗಕ್ಕಿಲ್ಲದೆ ಬೀಗ ಹಾಕಲಾಗಿದೆ.
ಕಳೆದ ಸುಮಾರು ಹತ್ತಾರು ವರ್ಷಗಳಿಂದ ಈ ದಾದಿಯರ ಕೇಂದ್ರ ಬೀಗ ಹಾಕಿದ ಸ್ಥಿತಿಯಲ್ಲಿದೆ. ಕಂಪೌಂಡ್ ನಿರ್ಮಿಸಿ ಪ್ರತ್ಯೇಕ ಕೊಠಡಿಯಾಗಿ ನಿರ್ಮಾಣಗೊಂಡಿರುವ ಈ ಕೇಂದ್ರ ಇದೀಗ ಉಪಯೋಗಶೂನ್ಯವಾಗಿ ಪಾಳು ಬಿದ್ದಿದೆ. ಕೇಂದ್ರದ ಒಳಗೆ ಹೊರಗೆ ಸುತ್ತಲೂ ಕಳೆ ಗಿಡಗಳು ಬೆಳೆದು ನಿಂತು ಇಡೀ ಕೇಂದ್ರವೇ ಜನರ ಕಣ್ಣಿಗೆ ಕಾಣದ ಸ್ಥಿತಿಯಲ್ಲಿದೆ. ಅಲ್ಲದೆ ಈ ಕೇಂದ್ರದ ಕೆಳಗಡೆ ಖಾಸಗಿ ವ್ಯಕ್ತಿಗಳ ಕಟ್ಟಡ ಇದ್ದು, ಅವರು ತಮ್ಮ ಅನುಕೂಲಕ್ಕಾಗಿ ಉಪಯೋಗಕ್ಕಿಲ್ಲದ ದಾದಿಯರ ಕೇಂದ್ರದ ಕಂಪೌಂಡಿನ ಅಡಿಭಾಗವನ್ನು ಅಗೆದು ಸಮತಟ್ಟುಗೊಳಿಸಿದ ಪರಿಣಾಮ ಕೇಂದ್ರದ ಆವರಣಗೋಡೆ ಅಪಾಯದ ಸ್ಥಿತಿಗೆ ಬಂದು ತಲುಪಿದೆ. ಇತ್ತೀಚೆಗೆ ಜೋರಾಗಿ ಮಳೆ ಸುರಿದ ಸಂದರ್ಭ ಕೇಂದ್ರದ ಒಂದು ಪಾಶ್ರ್ವದ ಆವರಣ ಗೋಡೆ ಕುಸಿದು ರಸ್ತೆ ಬದಿಗೆ ಬಿದ್ದಿದೆ. ಇನ್ನೂ ಕೂಡಾ ಆವರಣ ಗೋಡೆಯ ಉಳಿದ ಭಾಗ ಕೂಡಾ ಕುಸಿತದ ಭೀತಿ ಎದುರಿಸುತ್ತಿದೆ.
ಈ ಭೂತಬಂಗಲೆಯಂತಿರುವ ಕೇಂದ್ರದ ಸಮೀಪದಲ್ಲೇ ಕಾಲುದಾರಿಯೊಂದಿದೆ. ಸಾಮಾನ್ಯವಾಗಿ ಈ ಕಾಲು ದಾರಿಯಲ್ಲಿ ಸಮೀಪದ ಅಂಗನವಾಡಿ ಕೇಂದ್ರಕ್ಕೆ ತೆರಳುವ ಪುಟಾಣಿಗಳೇ ಹೆಚ್ಚಾಗಿ ನಡೆದುಕೊಂಡು ಹೋಗುತ್ತಿರುತ್ತಾರೆ. ಈ ಕೇಂದ್ರ ಕಳೆ ಗಿಡಗಳಿಂದಾವೃತಗೊಂಡು ಇಲ್ಲಿ ಹಾವು ಮೊದಲಾದ ಸರೀಸೃಪಗಳ ಸಂಚಾರ ಸ್ಥಳವೂ ಆಗಿರುವುದಲ್ಲದೆ ಆವರಣ ಗೋಡೆಯೂ ಕುಸಿದು ಬೀಳುವ ಅಪಾಯದಲ್ಲಿದೆ. ಇಲ್ಲಿನ ಶಿಥಿಲಾವಸ್ಥೆಯಲ್ಲಿರುವ ಕೇಂದ್ರದ ಬಗ್ಗೆ ಸ್ಥಳೀಯ ಸಾರ್ವಜನಿಕರು ಈಗಾಗಲೇ ಹಲವು ಬಾರಿ ತಾಲೂಕು ಆರೋಗ್ಯಾಧಿಕಾರಿ ಸಹಿತ ಸಂಬಂಧಫಟ್ಟ ಇಲಾಖಾಧಿಕಾರಿಗಳಿಗೆ ಮನವಿ ನೀಡಿ ಕಾಯಕಲ್ಪಕ್ಕೆ ಆಗ್ರಹಿಸಿದ್ದಾರಾದರೂ ಈ ಬಗ್ಗೆ ಇದುವರೆಗೂ ಯಾವುದೇ ಕ್ರಮ ಜರುಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಇಲ್ಲಿನ ಹಳೆಯ ದಾದಿಯರ ಕೇಂದ್ರ ಅಪಾಯದ ಕರೆಗಂಟೆ ಭಾರಿಸುತ್ತಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಇಲ್ಲಿನ ಹಳೆಯ ಕೇಂದ್ರಕ್ಕೆ ಸೂಕ್ತ ಕಾಯಕಲ್ಪ ಒದಗಿಸುವಂತೆ ಸ್ಥಳೀಯರ ನಾಗರಿಕರು ಆಗ್ರಹಿಸಿದ್ದಾರೆ.
0 comments:
Post a Comment