ಚೆನ್ನೈ, ಸೆಪ್ಟೆಂಬರ್ 28, 2025 (ಕರಾವಳಿ ಟೈಮ್ಸ್) : ತಮಿಳುನಾಡಿನಲ್ಲಿ ಮುಂದಿನ 2026ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಕರೂರಿನಲ್ಲಿ ನಟ ಮತ್ತು ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ಮುಖ್ಯಸ್ಥ ವಿಜಯ್ ಅವರ ರ್ಯಾಲಿಯಲ್ಲಿ ಕಾಲ್ತುಳಿತದಿಂದಾಗಿ ಭಾರೀ ದುರಂತ ಸಂಭವಿಸಿದ್ದು, ಸುಮಾರು 31ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದ್ದು, ಸುಮಾರು 40ಕ್ಕೂ ಹೆಚ್ಚು ಮಂದಿಯ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ರ್ಯಾಲಿ ನಡೆಯುವ ಸ್ಥಳಕ್ಕೆ ನಿಗದಿತ ಸಮಯಕ್ಕಿಂತ ಸುಮಾರು 6 ತಾಸು ತಡವಾಗಿ ವಿಜಯ್ ಆಗಮಿಸಿದ್ದು, ಈ ವೇಳೆ ಜನ ನೂಕು ನುಗ್ಗಲು ನಡೆಸಿದ ಪರಿಣಾಮ ಕಾಲ್ತುಳಿತ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಕಾಲ್ತುಳಿತದ ವೇಳೆ ಹಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಹಲವು ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ವಿಜಯ್ ತಕ್ಷಣ ತಮ್ಮ ಭಾಷಣವನ್ನು ನಿಲ್ಲಿಸಿ ಕಾರ್ಯಕರ್ತರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್‍ಗೆ ದಾರಿ ಮಾಡಿಕೊಡುವಂತೆ ಕೇಳಿಕೊಂಡರು.
ಟಿವಿಕೆ ಪಕ್ಷದ ರ್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ಕುರಿತಂತೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕರೂರ್ ಜಿಲ್ಲಾಧಿಕಾರಿಗೆ ಸ್ಥಳಕ್ಕೆ ಧಾವಿಸಿ ವೈದ್ಯಕೀಯ ನೆರವು ನೀಡುವಂತೆ ಸೂಚಿಸಿದರು. ಆರೋಗ್ಯ ಸಚಿವರು ಮತ್ತು ಶಾಲಾ ಶಿಕ್ಷಣ ಸಚಿವರು ಕರೂರ್ ಗೆ ತೆರಳುವಂತೆ ಸೂಚಿಸಿದ್ದಾರೆ.
ರ್ಯಾಲಿ ವೇಳೆ ಸುಮಾರು ಲಕ್ಷ ಮಂದಿ ಸೇರಿದ್ದರು ಎಂದು ಅಂದಾಜಿಸಲಾಗಿದ್ದು, ಹೀಗಾಗಿ ಪೆÇಲೀಸರಿಗೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗುತ್ತಿದೆ. ದುರಂತ ಕುರಿತು ಕೇಂದ್ರ ಸರ್ಕಾರ ತಮಿಳುನಾಡು ಸರಕಾರದಿಂದ ವರದಿ ಕೇಳಿದೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ,
ಈ ಮಧ್ಯೆ ದುರಂತ ಕುರಿತು ಟಿವಿಕೆ ಮುಖ್ಯಸ್ಥ ವಿಜಯ್ ಪ್ರತಿಕ್ರಯಿಸಿದ್ದು, ದುರಂತದಿಂದ ಹೃದಯ ಚೂರಾಗಿದೆ. ಅಸಹನೀಯ, ವಿವರಿಸಲಾಗದ ನೋವು ಮತ್ತು ದುಃಖದಲ್ಲಿರುವುದಾಗಿ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ವಿಜಯ್, ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಕರೂರು ಕಾಲ್ತುಳಿತ ದುರಂತದಲ್ಲಿ ಮೃತರ ಕುಟುಂಬಸ್ಥರಿಗೆ ತಮಿಳ್ನಾಡು ಸಿಎಂ ಸ್ಟಾಲಿನ್ ಅವರು ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರತಿಕ್ರಯಿಸಿರುವ ಅವರು, ಕಾಲ್ತುಳಿತದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೂ 10 ಲಕ್ಷ ರೂಪಾಯಿ ಪರಿಹಾರ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬರಿಗೂ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಕಾಲ್ತುಳಿತದ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶೆ ಅರುಣಾ ಜಗದೀಶನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗುವುದು ಎಂದಿದ್ದಾರೆ
ಶನಿವಾರ ರಾತ್ರಿ ಕರೂರಿಗೆ ಭೇಟಿ ನೀಡಿ, ಸಂತ್ರಸ್ತರ ಕುಟುಂಬಗಳನ್ನು ಹಾಗೂ ಗಾಯಾಳುಗಳನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸುತ್ತೇನೆ. ತಮಿಳಿಗ ವೆಟ್ರಿ ಕಳಗಂ ಪಕ್ಷದ ರ್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 8 ಮಕ್ಕಳು ಮತ್ತು 16 ಮಹಿಳೆಯರು ಸೇರಿದಂತೆ 36 ಜನರು ಸಾವನ್ನಪ್ಪಿದ್ದಾರೆ. ಸದ್ಯ ತಿರುಚಿ, ಸೇಲಂ ಮತ್ತು ದಿಂಡಿಗಲ್ ಜಿಲ್ಲಾಧಿಕಾರಿಗಳು ಕರೂರಿಗೆ ಹೋಗಿ ಪರಿಹಾರ ಕಾರ್ಯಗಳ ಬಗ್ಗೆ ಕ್ರಮವಹಿಸಿ ಎಂದು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ನಟ ವಿಜಯ ಶನಿವಾರ (ಸೆ. 27) ಮಧ್ಯಾಹ್ನದ ಹೊತ್ತಿಗೆ ಕರೂರಿಗೆ ತಲುಪಬೇಕಿತ್ತು. ಆದರೆ ಏಳು ಗಂಟೆಗಳ ಕಾಲ ತಡವಾಗಿ ಬಂದ ಕಾರಣ ಜನಸಂದಣಿ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿತು ಎನ್ನಲಾಗಿದೆ. ನಟ ಸ್ಥಳಕ್ಕೆ ಬರುತ್ತಿದ್ದಂತೆ ಜನರ ನೂಕಾಟ, ತಳ್ಳಾಟ ಹೆಚ್ಚಾಗಿ ಉಸಿರುಗಟ್ಟಲು ಶುರುವಾಗಿದ್ದು, ಇದರಿಂದ ಜನರು ಸ್ಥಳದಲ್ಲೇ ಮೂರ್ಛೆ ಹೋಗಲಾರಂಭಿಸಿದರು. ಇದನ್ನು ಗಮನಸಿದ ನಟ ವಿಜಯ್ ಕೂಡಲೇ ತಮ್ಮ ಭಾಷಣ ನಿಲ್ಲಿಸಿ, ನೀರಿನ ಬಾಟಲಿಗಳನ್ನು ಎಸೆದಿದ್ದಾರೆ ಎಂದು ಹೇಳಲಾಗಿದೆ.
0 comments:
Post a Comment