ಮಂಗಳೂರು, ಸೆಪ್ಟೆಂಬರ್ 17, 2025 (ಕರಾವಳಿ ಟೈಮ್ಸ್) : ವಿವಿಧ ಸಂಸ್ಥೆಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ಸ್ವಂತಕ್ಕೆ ಬಳಸಿಕೊಂಡು ಬ್ಯಾಂಕಿಗೆ ವಂಚಿಸಿದ ಪ್ರಕರಣ ಬೇಧಿಸಿದ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು-ಪಂಪ್ ವೆಲ್ ಉಜ್ಜೋಡಿ ನಾರ್ಥನ್ ಸ್ಕೈ ಸಿಟಿ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಮುನೀರ್ ಕದಮನ್ ಅಬೂಬಕ್ಕರ್ (53), ನಂದಿಗುಡ್ಡೆ ಲಿಯೋನಾ ಅಪಾರ್ಟ್ ಮೆಂಟ್ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಹುಸೇನ್ ಪಿ (52) ಹಾಗೂ ಜೆಪ್ಪು-ಮಾರ್ಗನ್ಸ್ ಗೇಟ್ ಇರ್ಫಾನ್ ಸೆಂಟರ್ ನಿವಾಸಿ ಮೊದ್ದೀನ್ ಎಂಬವರ ಪುತ್ರ ಮೊಹಮ್ಮದ್ ಮುಸ್ತಫಾ (27) ಎಂದು ಹೆಸರಿಸಲಾಗಿದೆ.
ಆರೋಪಿಗಳು ಕಂಪೆನಿ ತೆರೆದು ಸುಳ್ಳು ದಾಖಲಾತಿ ಸೃಷ್ಟಿಸಿ ಲೋನ್ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ಮೋಸ ಮಾಡಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಶಾಮೀಲಿನೊಂದಿಗೆ ಆರೋಪಿಗಳು ಲೋನ್ ನೆಪದಲ್ಲಿ ಸಂಸ್ಥೆಯ ಹೆಸರಿನಲ್ಲಿ ಸಾಲ ಪಡೆದು ವಿವಿಧ ಖಾತೆಗಳಿಗೆ ವರ್ಗಾಯಿಸಿ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.
ಮಂಗಳೂರು ಪೊಲೀಸರು ಆರೋಪಿಗಳ ಜಾಲವನ್ನು ಪತ್ತೆ ಹಚ್ಚಿ ಖದೀಮರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಸ್ಟೇಟ್ ಬ್ಯಾಂಕ್ ಇಂಡಿಯಾ ಮಲ್ಲಿಕಟ್ಟೆ ಶಾಖೆಯಿಂದ ಎಂ ಎಸ್ ಎಂ ಇ ಯೋಜನೆಯಡಿಯಲ್ಲಿ ಮೆ. ಇಲೆಕ್ಟ್ರೋ ವಲ್ರ್ಡ್ ಎಂಟರ್ ಪ್ರೈಸಸ್ ಎಂಬ ಸಂಸ್ಥೆಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಸುಮಾರು 1.20 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ.
ಅದೇ ರೀತಿ ಮೆ. ಎಂ ಎಚ್ ಎಂಟರ್ ಪ್ರೈಸಸ್ ಎಂಬ ಸಂಸ್ಥೆಯ ನಕಲಿ ದಾಖಲೆಗಳನ್ನು ಸಲ್ಲಿಸಿ ಸುಮಾರು 1.30 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿಸಿಕೊಂಡು, ಹಣವನ್ನು ಉದ್ದೇಶಿತ ವ್ಯವಹಾರಕ್ಕೆ ಬಳಸದೇ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಸ್ವಂತಕ್ಕೆ ಉಪಯೋಗಿಸಿ ವಂಚಿಸಿ ಬ್ಯಾಂಕಿಗೆ ನಷ್ಟ ಉಂಟು ಮಾಡಿದ ಬಗ್ಗೆ ಸೆ 16ರಂದು ಎಸ್ ಬಿ ಐ ಚೀಪ್ ಮಾನ್ಯೇಜರ್ ಅವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆಯಲ್ಲಿ ಅಪರಾಧ ಕ್ರಮಾಂಕ 130/2025 ಮತ್ತು 131/2025 ಕಲಂ 316(2), 316(5), 318(2), 318(3) ಜೊತೆಗೆ 3(5) ಬಿ ಎನ್ ಎಸ್ ಪ್ರಕಾರ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು.
ಪ್ರಕರಣ ಕೈಗೆತ್ತಿಕೊಂಡ ಮಂಗಳೂರು ಪೊಲೀಸರು ವಂಚನಾ ಜಾಲ ಬೇಧಿಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ. ಆರೋಪಿಗಳ ಪೈಕಿ ಮುನೀರ್ ಕದಮನ್ ಅಬೂಬಕರ್ ಎಂಬಾತ ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಎರಡೂ ಪ್ರಕರಣಗಳನ್ನು ಮುಂದಿನ ತನಿಖೆಯ ಬಗ್ಗೆ ಸಿಸಿಬಿ ಮಂಗಳೂರು ಘಟಕಕ್ಕೆ ವರ್ಗಾಯಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
0 comments:
Post a Comment