ಬಂಟ್ವಾಳ, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡು-ಅಡ್ಡಹೊಳೆ ನೂತನ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಪಾಣೆಮಂಗಳೂರು ಸಮೀಪದ ನರಿಕೊಂಬು ಗ್ರಾಮದ ನೆಹರುನಗರ ಹಾಗೂ ಪಿತ್ತಿಲಗುಡ್ಡೆ ಆಸುಪಾಸಿನ ಜನ ತಮ್ಮ ಊರಿಗೆ ಪ್ರವೇಶ ಪಡೆಯಲು ಡಿವೈಡರ್ ಬಂದ್ ಆಗಿರುವುದರಿಂದ ದಾರಿ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ.
ಹೆದ್ದಾರಿ ಹಾಗೂ ಫ್ಲೈ ಓವರ್ ಮೂಲಕ ವಾಹನಗಳು ನೇರವಾಗಿ ಸಂಚರಿಸುತ್ತಿರುವ ಸನ್ನಿವೇಶ ಇರುವುದರಿಂದ ಈ ಪ್ರದೇಶಗಳ ಜನ ಪಾಣೆಮಂಗಳೂರು ಪೇಟೆ ಅಥವಾ ಬಿ ಸಿ ರೋಡು ಪೇಟೆಗೆ ಸಂಪರ್ಕ ಸಾಧಿಸಲು ಕಿಲೋ ಮೀಟರ್ ಗಟ್ಟಲೆ ದೂರ ಕ್ರಮಿಸಬೇಕಾದ ಅನಿವಾರ್ಯತೆ ಇದೆ. ಒಂದು ಕಡೆಯಿಂದ ಬಿ ಸಿ ರೋಡು ಮುಖ್ಯ ವೃತ್ತದವರೆಗೆ ಕ್ರಮಿಸಿ ಅಲ್ಲಿಂದ ತಿರುವು ಪಡೆಯಬೇಕಾಗುತ್ತದೆ. ಇನ್ನೊಂದು ಕಡೆಯಿಂದ ಪಾಣೆಮಂಗಳೂರು ಕಲ್ಲುರ್ಟಿ ಗುಡಿವರೆಗೂ ಕ್ರಮಿಸಿ ಅಲ್ಲಿಂದ ತಿರುವು ಪಡೆಯಬೇಕಾಗಿದೆ. ಇದರಿಂದ ಇಲ್ಲಿನ ಜನ ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಈ ಸಮಸ್ಯೆಯಿಂದಾಗಿ ಸ್ಥಳೀಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳು ಕೂಡಾ ಬಹಳಷ್ಟು ದೂರ ಕ್ರಮಿಸಬೇಕಾಗಿರುವುದು ಈ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಅನಾನುಕೂಲವಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಕಷ್ಟ ಅನುಭವಿಸುವಂತಾಗಿದೆ. ಸಾರ್ವಜನಿಕರು ಕೂಡಾ ಬಾಡಿಗೆ ವಾಹನಗಳಲ್ಲಿ ಸಂಚರಿಸುವ ಸಂದರ್ಭ ಸುತ್ತು ಬಳಸಿದ ಸಂಚಾರವಾಗಿರುವ ಕಾರಣಕ್ಕಾಗಿ ದುಬಾರಿ ಬಾಡಿಗೆ ತೆರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕಾರಣಕ್ಕಾಗಿ ಇಲ್ಲಿನ ಜನರ ಅನುಕೂಲತೆಗಾಗಿ ಸ್ಥಳೀಯ ಪರಿಸರದಲ್ಲಿ ಚತುಷ್ಪಥ ಹೆದ್ದಾರಿ ಮಧ್ಯೆ ಎಲ್ಲರಿಗೂ ಅನುಕೂಲವಾಗುವ ನಿರ್ದಿಷ್ಟ ಸ್ಥಳವೊಂದರಲ್ಲಿ ಡಿವೈಡರ್ ಓಪನ್ ಮಾಡಿ ವಾಹನಗಳ ತಿರುವಿಗೆ ಅವಕಾಶ ಕಲ್ಪಿಸಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment