ಬಂಟ್ವಾಳ, ಸೆಪ್ಟೆಂಬರ್ 02, 2025 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಗೌರವಾಧ್ಯಕ್ಷತೆಯಲ್ಲಿ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ್ ಜೈನ್ ಅಧ್ಯಕ್ಷತೆಯ ಜಕ್ರಿಬೆಟ್ಟು ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಜಕ್ರಿಬೆಟ್ಟು-ಬೈಪಾಸಿನಲ್ಲಿ ಆಗಸ್ಟ್ 27 ರಿಂದ ಆರಂಭಗೊಂಡ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಆಗಸ್ಟ್ 31 ರಂದು ಭಾನುವಾರ ರಾತ್ರಿ ವೈಭಯುತ ಶೋಭಾಯಾತ್ರೆಯೊಂದಿಗೆ ಸಮಾಪನಗೊಂಡಿತು.
ಕಳೆದ 22 ವರ್ಷಗಳಿಂದ ಸಮಾಜದ ಎಲ್ಲ ವಿಭಾಗದ ಜನರ ಒಗ್ಗೂಡುವಿಕೆಯಿಂದ ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿ ‘ಬಂಟ್ವಾಳ ಹಬ್ಬ’ವಾಗಿ ಆಚರಿಸುತ್ತಾ ಬಂದಿರುವ ಜಕ್ರಿಬೆಟ್ಟು ಗಣೇಶೋತ್ಸವ ಪ್ರತಿ ದಿನದ ಎಲ್ಲ ಹೊತ್ತು ಕೂಡಾ ಅನ್ನಪ್ರಸಾದ ವಿತರಣೆಯೊಂದಿಗೆ ವಿಶೇಷವಾಗಿ ಗುರುತಿಸಿಕೊಂಡಿದೆ. 5 ದಿನಗಳ ಕಾಲ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲ್ಪಟ್ಟಿತು.
ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮಕ್ಕೆ ಎಲ್ಲೂ ಭಂಗ ಬರದಂತೆ ಸಮಯಕ್ಕೆ ಸರಿಯಾಗಿ ಪ್ರತಿದಿನವೂ ಕಾರ್ಯಕ್ರಮ ಆರಂಭಗೊಂಡು ಸಮಯಕ್ಕೆ ಸರಿಯಾಗಿ ಮುಕ್ತಾಯಗೊಳ್ಳುತ್ತಿತ್ತು. ವಿಸರ್ಜನಾ ಶೋಭಾಯಾತ್ರೆ ಕೂಡಾ ಎಂದಿಗಿಂತ ಬಹಳಷ್ಟು ಬೇಗ ಮುಗಿಸಿ ಪೊಲೀಸ್ ಇಲಾಖೆಯ ಸೂಚನೆಯನ್ನು ಪಾಲಿಸಲಾಗಿತ್ತು.
ಶ್ರೀಗಣೇಶನ ಶೋಭಾ ಯಾತ್ರೆಯು ಪ್ರತಿಷ್ಠಾಪನಾ ಸ್ಥಳದಿಂದ ಬಂಟ್ವಾಳ ಬೈಪಾಸ್ ಜಂಕ್ಷನ್ ವರೆಗೆ ಸಾಗಿ ಬಂದು, ಅಲ್ಲಿಂದ ಎಡಕ್ಕೆ ತಿರುಗಿ ಬಂಟ್ವಾಳ ಪೇಟೆಯನ್ನು ಪ್ರವೇಶಿಸಿ ತ್ಯಾಗರಾಜ ರಸ್ತೆಯ ಮೂಲಕ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಮುಂಭಾಗದಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಜಲಸ್ಥಂಭನಗೊಳಿಸಲಾಯಿತು.
ವಿವಿಧ ಸಂಘ-ಸಂಸ್ಥೆಗಳ ಟ್ಯಾಬ್ಲೋ, ಸ್ಥಬ್ದ ಚಿತ್ರ, ಕಲ್ಲಡ್ಕ ಶಿಲ್ಪಾ ಬಳಗದ ಗೊಂಬೆ ಕುಣಿತ, ಬಂಟ್ವಾಳ ಯುವ ಕಾಂಗ್ರೆಸ್ ವತಿಯಿಂದ ಪಿಲಿ ನಲಿಕೆ, ಮಕ್ಕಳ ಕುಣಿತ, ಭಜನೆ, ತಾಲೀಮು ಪ್ರದರ್ಶನ, ನಾಸಿಕ್ ಬ್ಯಾಂಡ್, ಪ್ರೇತ ನೃತ್ಯ ಶೋಭಾ ಯಾತ್ರೆಗೆ ವಿಶೇಷ ಮೆರಗು ನೀಡಿತ್ತು. ದಾರಿಯುದ್ದಕ್ಕೂ ಭಕ್ತರು ಗಣಪತಿ ದೇವರಿಗೆ ಹಣ್ಣು ಕಾಯಿ, ಆರತಿ ಸಮರ್ಪಿಸಿದರು.
ಗಣೇಶ ಮೂರ್ತಿಯ ರಚನೆಗಾರ ಬಿ ಸದಾಶಿವ ಶೆಣೈ ಮತ್ತವರ ಬಳಗ ಗಣಪತಿ ಮೂರ್ತಿಗೆ ಹೂವಿನಾಲಂಕಾರದ ಅಂತಿಮ ಸ್ಪರ್ಶ ನೀಡಿದರು. ವೇದಮೂರ್ತಿ ಸುದರ್ಶನ್ ಬಲ್ಲಾಳ್ ಪೌರೋಹಿತ್ಯ ನೆರವೇರಿಸಿದರು. ಸಮಿತಿಯ ಗೌರಾವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ, ಅಧ್ಯಕ್ಷ ಬಿ ಪದ್ಮಶೇಖರ ಜೈನ್, ಪ್ರಮುಖರಾದ ರಾಜೀವ ಶೆಟ್ಟಿ ಎಡ್ತೂರು, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಸದಾಶಿವ ಬಂಗೇರ, ಸುಧಾಕರ ಶೆಣೈ ಖಂಡಿಗ, ಮಹಾಬಲ ಬಂಗೇರ, ಪ್ರಕಾಶ್ ಜೈನ್ ಪಂಜಿಕಲ್ಲು, ಸುದೀಪ್ ಕುಮಾರ್ ಶೆಟ್ಟಿ, ಪ್ರವೀಣ್ ಕಿಣಿ, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಆರ್ ಅಂಚನ್, ದೇವಪ್ಪ ಕುಲಾಲ್, ಸುರೇಶ್ ಪೂಜಾರಿ ಜೋರಾ, ವೆಂಕಪ್ಪ ಪೂಜಾರಿ ಬಂಟ್ವಾಳ ಮೊದಲಾದವರು ಶೋಭಾಯಾತ್ರೆಯ ಮುಂಚೂಣಿಯಲ್ಲಿದ್ದರು. ಶೋಭಾಯಾತ್ರೆಯ ಮಧ್ಯೆ ಅಲ್ಲಲ್ಲಿ ಸುಡುಮದ್ದಿನ ಪ್ರದರ್ಶನ ನಡೆಯಿತು.
0 comments:
Post a Comment