ಮಂಗಳೂರು, ಸೆಪ್ಟೆಂಬರ್ 18, 2025 (ಕರಾವಳಿ ಟೈಮ್ಸ್) : ಸಮಾಜದಲ್ಲಿ ಬದಲಾವಣೆ ಕಾಣಬೇಕಾದರೆ, ಜವಾಬ್ದಾರಿಯುತ ಮಹಿಳೆಯರಿಂದ ಮಾತ್ರ ಸಾಧ್ಯ. ಮಾದಕಮುಕ್ತ ಸಮಾಜ ನಿರ್ಮಾಣ ಮಹಿಳೆಯರ ದೃಢ ನಿಶ್ಚಯದಿಂದ ಸಾಧ್ಯ. ಇದಕ್ಕಾಗಿ ಮಹಿಳೆಯರು ಸಮಾಜವನ್ನು ತಿದ್ದುವ ಕಾಯಕಕ್ಕೆ ಇಳಿಯಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಭಾರಿ ತಿಳಿಸಿದರು.
ಕೌಶಲ್ಯಾಭಿವೃದ್ಧಿ ಜೀವನೋಪಾಯ ಹಾಗೂ ಉದ್ಯಮಶೀಲತೆ ಇಲಾಖೆಯ-ಸಂಜೀವಿನಿಯಡಿ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಾದಕ ಮುಕ್ತ ಕರ್ನಾಟಕ-ಪರಿವರ್ತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆ ಮತ್ತು ವ್ಯಸನದಿಂದ ಉಂಟಾಗುವ ದೌರ್ಜನ್ಯ, ಗೃಹ ಹಿಂಸೆ ಮತ್ತು ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ, ಸಮಗ್ರ ಜಾಗೃತಿ ಮೂಡಿಸಲು ಸರಕಾರದ ಆದೇಶದಂತೆ ‘ಮಾದಕಮುಕ್ತ ಕರ್ನಾಟಕ ಅಭಿಯಾನ” ವನ್ನು ಸೆಪ್ಟೆಂಬರ್ 30 ರವರೆಗೆ ರಾಜ್ಯದಾದ್ಯಂತ ಸ್ವ-ಸಹಾಯ ಗುಂಪುಗಳ ಮಹಿಳೆಯರು, ಸಮುದಾಯದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟಲು ಮತ್ತು ಅವುಗಳ ಪರಿಣಾಮಗಳ ಬಗ್ಗೆ ಸಮುದಾಯದ ಮಟ್ಟದಲ್ಲಿ ಜಾಗೃತಿ ಮೂಡಿಸಲು, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಡಿವೈಎಸ್ಪಿ ಗಾಯತ್ರಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ ನವೀನ್‍ಚಂದ್ರ ಕುಲಾಲ್ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪುಂಡಲೀಕ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಸಮಾಲೋಚಕರಾದ ದಿವ್ಯ ಎನ್ ಅವರು ಮಾದಕ ವ್ಯಸನ, ಹೊರ ಬರುವ ವಿಧಾನ, ಕಾನೂನು ಚೌಕಟ್ಟನ್ನು ತಿಳಿಸಿದರು.
ಅಭಿಯಾನವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಬೀದಿ ನಾಟಕಗಳು, ಜಾಗೃತಿ ರ್ಯಾಲಿಗಳು, ಉಪನ್ಯಾಸಗಳು, ಕಾರ್ಯಾಗಾರಗಳು, ಕರಪತ್ರಗಳು ಮತ್ತು ಪೋಸ್ಟರ್ ಗಳು, ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಅಭಿಯಾನಗಳು, ಆರೋಗ್ಯ ಸಲಹಾ ಶಿಬಿರಗಳು, ಕಿರುಚಿತ್ರಗಳ ಪ್ರದರ್ಶನಗಳು ಪ್ರಮಾಣ ವಚನ ಸಮಾರಂಭಗಳು ಈ ಎರಡು ತಿಂಗಳ ಅಭಿಯಾನದಲ್ಲಿ ಸೇರಿವೆ.
ಇದೇ ವೇಳೆ ಮಾದಕ ವಸ್ತು ಬಳಕೆ ವಿರುದ್ದ ಪ್ರಮಾಣ ವಚನ ಸ್ವೀಕಾರ ಮಾಡಲಾಯಿತು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಸ್ವಾಗತಿಸಿ, ವಾಣಿಶ್ರೀ ವಂದಿಸಿದರು. ವಿನಿತ್ ಮೊನಿಸ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment