ಬಂಟ್ವಾಳ, ಸೆಪ್ಟೆಂಬರ್ 22, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡು ಪೇಟೆಯ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ವ್ಯಕ್ತಿಯ ಜೇಬಿನಿಂದ 1 ಲಕ್ಷ ರೂಪಾಯಿ ಲಪಟಾಯಿಸಿದ ಪ್ರಕರಣದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳ ರಾಜ್ಯದ, ತ್ರಿಶೂರ್ ಜಿಲ್ಲೆ, ಚಾವಕ್ಕಾಡು ಗ್ರಾಮದ ನಿವಾಸಿ ನಜೀರ್ (55) ಎಂದು ಹೆಸರಿಸಲಾಗಿದೆ. ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ನಿವಾಸಿ ರಂಗನಾಥ ಅವರು ಬಿ ಸಿ ರೋಡಿನ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಅವರ ಜೇಬಿನಲ್ಲಿದ್ದ 50 ಸಾವಿರ ರೂಪಾಯಿಯ ಎರಡು ಕಟ್ಟುಗಳನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 91/2025 ಕಲಂ 303(2) ಪ್ರಕಾರ ಪ್ರಕರಣ ದಾಖಲಾಗಿತ್ತು.
ರಂಗನಾಥ ಬೆಳ್ಳಾಲ ಅವರು ತಮ್ಮ ಕಾರನ್ನು ಮಾರಾಟ ಮಾಡಿ 1.60 ಲಕ್ಷ ರೂಪಾಯಿ ಹಣದೊಂದಿಗೆ ಮತ್ತೊಂದು ಉಪಯೋಗಿಸಿದ ಕಾರು ಖರೀದಿಸಲು ಆಗಸ್ಟ್ 14 ರಂದು ಬಿ ಸಿ ರೋಡಿಗೆ ಬಂದಿದ್ದರು. ಆದರೆ, ದಾಖಲೆಗಳಲ್ಲಿನ ವ್ಯತ್ಯಾಸದಿಂದಾಗಿ ಖರೀದಿ ಒಪ್ಪಂದ ಅಂತಿಮಗೊಳ್ಳದೆ ಅವರು ಕೈಕಂಬದಲ್ಲಿರುವ ಸ್ನೇಹಿತನ ಮನೆಯಲ್ಲಿ ರಾತ್ರಿ ತಂಗಿದ್ದರು.
ಆಗಸ್ಟ್ 15 ರಂದು ಅವರು ಕೊಟ್ಟಿಗೆಹಾರಕ್ಕೆ ಪ್ರಯಾಣಿಸಲು ಬಿ ಸಿ ರೋಡು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ, ಅವರ ಪ್ಯಾಂಟ್ ಜೇಬಿನಲ್ಲಿ ತಲಾ 50 ಸಾವಿರ ರೂಪಾಯಿಗಳ ಮೂರು ಕಟ್ಟುಗಳು ಹಾಗೂ 10 ಸಾವಿರ ರೂಪಾಯಿಯ ಒಂದು ಕಟ್ಟು ಸಹಿತ ಒಟ್ಟು 1.60 ಲಕ್ಷ ರೂಪಾಯಿ ಹಣ ಇತ್ತು. ಅವರು ಬಸ್ ಹತ್ತಿದ ನಂತರ 50 ಸಾವಿರ ರೂಪಾಯಿಗಳ 2 ಕಟ್ಟುಗಳ ಹಣ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಅವರು ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಸೆ 19 ರಂದು ಆರೋಪಿಯನ್ನು ಮಂಗಳೂರಿನ ಹಂಪನಕಟ್ಟೆಯಲ್ಲಿ ವಶಕ್ಕೆ ಪಡೆದು, 22 ಸಾವಿರ ರೂಪಾಯಿ ಹಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಸೆ 20 ರಂದು ಪೊಲೀಸರು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
0 comments:
Post a Comment