ಬಂಟ್ವಾಳ, ಸೆಪ್ಟೆಂಬರ್ 26, 2025 (ಕರಾವಳಿ ಟೈಮ್ಸ್) : ಪುದು ಗ್ರಾಮ ಪಂಚಾಯತಿನಲ್ಲಿ ಕಾಂಗ್ರೆಸ್ ಪಕ್ಷದ ಸ್ಪಷ್ಟ ಬಹುಮತ ಹೊಂದಿ ಮುನ್ನಡೆಯುತ್ತಿದ್ದು, ಇಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಲ್ಲಾಗಲೀ, ಕಾಂಗ್ರೆಸ್ ಪಕ್ಷದ ನಾಯಕರು-ಕಾರ್ಯಕರ್ತರಲ್ಲಾಗಲೀ ಯಾವುದೇ ಗೊಂದಲಗಳಿಲ್ಲ. ಪಂಚಾಯತಿನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹಾಗೇ ಮುಂದುವರಿದಿದೆ ಎಂದು ಕೆಪಿಸಿಸಿ ಸದಸ್ಯ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಹೇಳಿದ್ದಾರೆ.
ಗುರುವಾರ ಸಂಜೆ ಪುದು ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾದ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪುದು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು, ಸ್ಥಳೀಯ ಶಾಸಕರೂ, ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿರುವ ಯು ಟಿ ಖಾದರ್ ಅವರ ಅಭಿವೃದ್ದಿ ಕಾಮಗಾರಿಗಳು ಹಾಗೂ ರಾಜ್ಯ ಕಾಂಗ್ರೆಸ್ ಸರಕಾರದ ಜನಪರ ಗ್ಯಾರಂಟಿ ಯೋಜನೆಗಳು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ನೀಡಿದೆ. ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಿದೆ ಎಂದರು.
ಪುದು ಪಂಚಾಯತಿನಲ್ಲಿ ಜನರಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಬೆಂಬಲಿತ ಎಲ್ಲ ಸದಸ್ಯರುಗಳು ಪಕ್ಷವನ್ನು ಸಂಘಟಿಸುವುದರ ಜೊತೆಗೆ ವಾರ್ಡ್ ಜನರ ಎಲ್ಲ ಆಶೋತ್ತರಗಳಿಗೂ ಶಕ್ತಿ ಮೀರಿ ಸ್ಪಂದಿಸುವ ಮೂಲಕ ಜನರ ಬೇಕು-ಬೇಡಗಳಿಗೆ ನಿರಂತರ ಧ್ವನಿಯಾಗುತ್ತಿದ್ದಾರೆ. ನಮ್ಮ ಸದಸ್ಯರುಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈ ಕಾರಣದಿಂದಾಗಿ ಇವತ್ತು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಯಾವುದೇ ಅಳುಕಿಲ್ಲದೆ ಬಹುಮತದಿಂದ ಆಯ್ಕೆಯಾಗಿದ್ದಾರೆ ಎಂದ ಉಮ್ಮರ್ ಫಾರೂಕ್ ಅವರು, ಮುಂದಿನ ದಿನಗಳಲ್ಲೂ ನಮ್ಮ ಪಕ್ಷದ ಬೆಂಬಲಿತ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಜನರಿಗಾಗಿ ಕೆಲಸ ಮಾಡಲು ಉತ್ಸುಕರಾಗಿದ್ದು, ಮುಂದೆಯೂ ಗ್ರಾಮದಲ್ಲಿ ಕಾಂಗ್ರೆಸ್ ಬಾವುಟ ಬಾನೆತ್ತರಕ್ಕೆ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
0 comments:
Post a Comment