ಬಂಟ್ವಾಳ, ಸೆಪ್ಟೆಂಬರ್ 26, 2025 (ಕರಾವಳಿ ಟೈಮ್ಸ್) : ಕಳೆದ ಇಪ್ಪತ್ತೈದು ವರ್ಷಗಳಿಗೂ ಅಧಿಕ ವರ್ಷಗಳಿಂದ ಪುದು ಗ್ರಾಮ ಪಂಚಾಯತಿನಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರೇ ಅಧಿಕಾರ ನಡೆಸಿದ್ದಾರೆ. ಈಗಲೂ ಕಾಂಗ್ರೆಸ್ ಪಕ್ಷದ ಬೆಂಬಲಿತರಾಗಿ ನಾವು ಗದ್ದುಗೆಗೇರಿದ್ದೇವೆ. ಜನರಿಗೆ ಉತ್ತಮ ಆಡಳಿತ ನೀಡುವ ಮೂಲಕ ಮುಂದೆಯೂ ಗ್ರಾಮದಲ್ಲಿ ಕಾಂಗ್ರೆಸ್ ಬಲಿಷ್ಠವಾಗಲಿದೆ ಎಂದು ಪುದು ಗ್ರಾಮ ಪಂಚಾಯತಿನಲ್ಲಿ 2ನೇ ಬಾರಿಗೆ ಗದ್ದುಗೆ ಏರಿರುವ ನೂತನ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ವಿಶ್ವಾಸ ವ್ಯಕ್ತಪಡಿಸಿದರು.
ಪುದು ಗ್ರಾಮ ಪಂಚಾಯತಿನಲ್ಲಿ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾದ ಬಳಿಕ ಜನರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಧಾನಸಭಾ ಸ್ಪೀಕರ್, ಕ್ಷೇತ್ರದ ಶಾಸಕ ಯು ಟಿ ಖಾದರ್ ಹಾಗೂ ಕೆಪಿಸಿಸಿ ಸದಸ್ಯ ಉಮ್ಮರ್ ಫಾರೂಕ್ ಅವರ ಸಮರ್ಥ ನಾಯಕತ್ವದ ಫಲವಾಗಿ ಪುದು ಗ್ರಾಮ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ ಎಂದರು.
ಪಂಚಾಯತಿನ ಪಕ್ಷದ ಬೆಂಬಲಿತ ಎಲ್ಲ ಸದಸ್ಯರುಗಳು ಹಾಗೂ ಪಕ್ಷದ ನಾಯಕರುಗಳ ಬೆಂಬಲದೊಂದಿಗೆ 2ನೇ ಬಾರಿಗೆ ಪಂಚಾಯತಿನ ಅಧಿಕಾರ ನನ್ನ ಪಾಲಿಗೆ ಬಂದಿದೆ. ಹಿಂದಿನ ಬಾರಿಯೂ ಸಮರ್ಥವಾಗಿ ಆಡಳಿತ ನಡೆಸಿದ್ದು, ಈ ಬಾರಿ ಇನ್ನೂ ಹೆಚ್ಚಿನ ಕಾಳಜಿ ಹಾಗೂ ಜನಪರವಾಗಿ ಕಾರ್ಯನಿರ್ವಹಿಸಿ ಗ್ರಾಮವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಲಾಗುವುದು ಜೊತೆಗೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಸಂಘಟಿಸಲು ಶ್ರಮ ವಹಿಸಲಾಗುವುದು ಎಂದರು.
0 comments:
Post a Comment