ಬಂಟ್ವಾಳ, ಸೆಪ್ಟೆಂಬರ್ 26, 2025 (ಕರಾವಳಿ ಟೈಮ್ಸ್) : ತಾಲೂಕಿನ ಪ್ರತಿಷ್ಠಿತ ಹಾಗೂ ಸ್ಪೀಕರ್ ಯು ಟಿ ಖಾದರ್ ಅವರ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುದು ಗ್ರಾಮ ಪಂಚಾಯತಿನ ದ್ವಿತೀಯಾರ್ಧದ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಮಾರಿಪಳ್ಳ ವಾರ್ಡಿನ ರಮ್ಲಾನ್ ಮಾರಿಪಳ್ಳ ಅವರು 2ನೇ ಬಾರಿಗೆ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷೆಯಾಗಿ ಅಮೆಮಾರ್ ವಾರ್ಡಿನ ರುಕ್ಸನಾ ಅವರು ಆಯ್ಕೆಯಾಗಿದ್ದಾರೆ.
ಗುರುವಾರ ಸಂಜೆ ಪುದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಯಿತು. ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರು ಚುನಾವಣಾಧಿಕಾರಿಯಾಗಿ ಹಾಗೂ ಉಪತಹಶೀಲ್ದಾರ್ ನವೀನ್ ಕುಮಾರ್ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
. ಸ್ಪೀಕರ್ ಯು ಟಿ ಖಾದರ್ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಮ್ಲಾನ್ ಮಾರಿಪಳ್ಳ ಈ ಹಿಂದೆ ಅಂದರೆ 2017 ರಿಂದ 2022ರವರೆಗೆ ಐದು ವರ್ಷಗಳ ಪೂರ್ಣ ಅವಧಿಗೆ ಅಧ್ಯಕ್ಷರಾಗಿ ಜನಾನುರಾಗಿಯಾಗಿದ್ದರು. ಈ ಬಾರಿ ಮತ್ತೆ ಕಾಂಗ್ರೆಸ್ ಪಕ್ಷ, ಸ್ಪೀಕರ್ ಯು ಟಿ ಖಾದರ್, ಜಿ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಸಹಿತ ಪಂಚಾಯತ್ ಸಹ ಸದಸ್ಯರುಗಳು ಒಮ್ಮತದಿಂದ ಅಧ್ಯಕ್ಷ ಹುದ್ದೆಗೆ ರಮ್ಲಾನ್ ಅವರ ಹೆಸರನ್ನು ಸೂಚಿಸಿದ್ದರು.
34 ಸದಸ್ಯ ಬಲ ಹೊಂದಿರುವ ಪುದು ಪಂಚಾಯತಿನಲ್ಲಿ 21 ಮಂದಿ ಕಾಂಗ್ರೆಸ್ ಬೆಂಬಲಿತರು,7 ಮಂದಿ ಎಸ್ ಡಿ ಪಿ ಐ ಹಾಗೂ 6 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಗುರುವಾರದ ಚುನಾವಣೆ ವೇಳೆ ವೇಳೆ ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರು ವಿದೇಶ ಪ್ರಯಾಣದಲ್ಲಿರುವ ಕಾರಣ ಗೈರಾಗಿದ್ದರು. ಆದರೂ 19 ಸಂಖ್ಯಾಬಲ ಹೊಂದಿ ಪೂರ್ಣ ಬಹುಮತದ ಕಾಂಗ್ರೆಸ್ ಬೆಂಬಲಿತ ರಮ್ಲಾನ್-ರುಕ್ಸಾನಾ ಅವರು ಅಧ್ಯಕ್ಷ- ಉಪಾಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ.
ಬಿಜೆಪಿ ಬೆಂಬಲಿತ ಸದಸ್ಯರಾದ ಸುಬ್ರಹ್ಮಣ್ಯ ರಾವ್ ಹಾಗೂ ವಿದ್ಯಾ ಅವರು ಮತ್ತು ಎಸ್ ಡಿ ಪಿ ಐ ಪಕ್ಷದಿಂದ ಮುಹಮ್ಮದ್ ಶಾಫಿ ಅಮ್ಮೆಮಾರ್ ಹಾಗೂ ಖೈರುನ್ನೀಸಾ ಅವರು ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಬೆಂಬಲಿತರು ಪಕ್ಷದ ಬೆಂಬಲಿತ 19 ಮತಗಳನ್ನು ಪಡೆದು ಜಯಭೇರಿ ಭಾರಿಸಿದರು. ಬಿಜೆಪಿ ಬೆಂಬಲಿತರು ತಲಾ ಆರು ಹಾಗೂ ಎಸ್ ಡಿ ಪಿ ಐ ಬೆಂಬಲಿತರು ತಲಾ ಏಳು ಮತಗಳಿಗೆ ತೃಪ್ತಿಪಟ್ಟುಕೊಂಡರು.
ಕಾಂಗ್ರೆಸ್ ಪಕ್ಷದ ಮುಡಿಪು ಬ್ಲಾಕ್ ವತಿಯಿಂದ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿದ್ದ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಆಸೀಫ್ ಇಕ್ಬಾಲ್ ಹಾಗೂ ಅಬೂ ಶಮೀರ್ ಫಜೀರ್ ಮತ್ತು ಕೆಪಿಸಿಸಿ ಸದಸ್ಯ, ಜಿ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಅವರು ಪಕ್ಷದ ಬೆಂಬಲಿತ ಎಲ್ಲ ಸದಸ್ಯರುಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಗಳ ನೇಮಕವನ್ನು ಸುಸೂತ್ರವಾಗಿ ನೆರವೇರಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಿಜೇತ ಅಭ್ಯರ್ಥಿಗಳನ್ನು ಕೆಪಿಸಿಸಿ ಸದಸ್ಯ ಉಮ್ಮರ್ ಫಾರೂಕ್, ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಮುಖರಾದ ಅಬೂ ಶಮೀರ್ ಫಜೀರ್, ಅಬ್ದುಲ್ ರಝಾಕ್ ಕುಕ್ಕಾಜೆ, ಪುದು ಪಂಚಾಯತ್ ನಿಕಪಟೂರ್ವ ಅಧ್ಯಕ್ಷೆ ರಶೀದಾ ಬಾನು, ಉಪಾಧ್ಯಕ್ಷ ಇಕ್ಬಾಲ್ ಸುಜೀರ್, ಹಾಶೀರ್ ಪೇರಿಮಾರ್ ಸಹಿತ ಪಂಚಾಯತ್ ಸದಸ್ಯರುಗಳು, ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಸಾರ್ವಜನಿಕರು ಅಭಿನಂದಿಸಿದರು. ಇದೇ ವೇಳೆ ರಮ್ಲಾನ್ ಮಾರಿಪಳ್ಳ ಅವರ ಆಯ್ಕೆಯನ್ನು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸ್ಥಳೀಯರು ಸಂಭ್ರಮ ವಿಜಯೋತ್ಸವ ಆಚರಿಸಿಕೊಂಡರು.
0 comments:
Post a Comment