ಬೆಂಗಳೂರು, ಸೆಪ್ಟೆಂಬರ್ 19, 2025 (ಕರಾವಳಿ ಟೈಮ್ಸ್) : ಪುತ್ತೂರು ಶಾಸಕ ಅಶೋಕ್ ರೈ ಅವರು ಶುಕ್ರವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ ಮೂರು ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದ್ದು ಮೂರಕ್ಕೂ ಸಿ ಎಂ ಅಸ್ತು ಎಂದಿದ್ದಾರೆ.
ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣವಾಗುವ ಬಗ್ಗೆ ಈಗಾಗಲೇ ಬಜೆಟಿನಲ್ಲಿ ಘೋಷಣೆಯಾಗಿದೆ. ಅಧಿಕಾರಿಗಳು ಬಂದು ಸ್ಥಳ ಸರ್ವೆ ನಡೆಸಿದ್ದಾರೆ. ಆ ಬಳಿಕದ ಪ್ರಕ್ರಿಯೆ ಬಗ್ಗೆ ಸಿ ಎಂ ಜೊತೆ ಶಾಸಕರು ಚರ್ಚೆ ನಡೆಸಿದರು. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಬೇಕು ಎಂದು ಮನವಿ ಮಾಡಲಾಯಿತು. ಇದಕ್ಕೆ ಒಪ್ಪಿಗೆ ಸೂಚಿಸಿದ ಸಿಎಂ ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಮುಂದಿನ ತಿಂಗಳು ತನ್ನ ನೇತೃತ್ವದಲ್ಲಿ ಸಚಿವರು, ಅಧಿಕಾರಿಗಳ ಸಭೆ ಕರೆದು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಪುತ್ತೂರು ಮೊಗೇರ ಸಂಘಕ್ಕೆ ಜಾಗ ಮಂಜೂರಾತಿಗೆ ಮುಖ್ಯಮಂತ್ರಿಗಳಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದು, ಇದಕ್ಕೂ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ ಮೊಗೇರ ಸಂಘದ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.
ಕೆದಿಲ ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 50 ಲಕ್ಷ ಅನುದಾನ ನೀಡುವಂತೆ ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಗ್ರಾಮಾಂತರ ಭಾಗದ ಯುವ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಚಟುವಟಿಕೆ ನಡೆಸಲು ಅವಕಾಶ ನೀಡುವ ಸಲುವಾಗಿ ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು ಅದರ ಅಭಿವೃದ್ದಿಗೆ ಅನುದಾನ ನೀಡಬೇಕೆಂದು ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು 50 ಲಕ್ಷ ಅನುದಾನಕ್ಕೆ ಮಂಜೂರಾತಿ ನೀಡಿದ್ದಾರೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
0 comments:
Post a Comment