ಬಂಟ್ವಾಳ, ಸೆಪ್ಟೆಂಬರ್ 03, 2025 (ಕರಾವಳಿ ಟೈಮ್ಸ್) : ಮನೆ ಮುಂದೆ ಅಕ್ರಮ ಮರಳು ಶೇಖರಣೆ ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಮರಳು ವಶಪಡಿಸಿಕೊಂಡ ಘಟನೆ ಕರ್ಪೆ ಗ್ರಾಮದ ಶಿಕ್ಷೆ ಗುಡ್ಡ ಎಂಬಲ್ಲಿ ನಡೆದಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೈ ಮಂಜನಾಥ ಟಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಶಿಕ್ಷೆ ಗುಡ್ಡ ಎಂಬಲ್ಲಿನ ನಿವಾಸಿ ವಿನೋದ್ ಎಂಬವರ ಮನೆ ಮುಂದೆ ಖಾಲಿ ಜಾಗದಲ್ಲಿ ಮರಳು ಶೇಖರಿಸಿದ್ದು ಕಂಡು ಬಂದಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುವ ವೇಳೆ ವಿನೋದ ಅವರು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಸುಮಾರು 3 ಸಾವಿರ ರೂಪಾಯಿ ಮೌಲ್ಯದ 1 ಲೋಡು ಪಿಕಪ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿನೋದರವರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ನದಿಯಿಂದ ಮರಳನ್ನು ಕಳವು ಮಾಡಿ ಮನೆ ಮುಂದೆ ಸಂಗ್ರಹಿಸಿ ಅಧಿಕ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಶೇಖರಿಸಿಟ್ಟಿದ್ದು ಅಲ್ಲದೆ ಮರಳು ಕಳವು ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದುದನ್ನು ಪತ್ತೆ ಮಾಡಿದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment