ಬಂಟ್ವಾಳ, ಸೆಪ್ಟೆಂಬರ್ 08, 2025 (ಕರಾವಳಿ ಟೈಮ್ಸ್) : ಜಾಂಡಿಸ್ ಹಾಗೂ ಲಿವರ್ ಖಾಯಿಲೆಯಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕರಿಯಂಗಳ ಗ್ರಾಮದ ಸಾಣೂರುಪದವು ಎಂಬಲ್ಲಿ ಸೆ 5 ರಂದು ಸಂಭವಿಸಿದೆ.
ಮೃತ ಯುವಕನನ್ನು ಇಲ್ಲಿನ ನಿವಾಸಿ ಸಂದೀಪ್ (22) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮೃತರ ಸಂಬಂಧಿ ಲೋಕೇಶ್ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ಚಿಕ್ಕಮ್ಮನ ಮಗನಾಗಿರುವ ಸಂದೀಪ್ ಆಗಸ್ಟ್ 31 ರಂದು ಕೂಲಿ ಕೆಲಸಕ್ಕೆ ಸಂಗಬೆಟ್ಟು ಎಂಬಲ್ಲಿಗೆ ಹೋದಾಗ ಅನಾರೋಗ್ಯದಿಂದ ತಲೆತಿರುಗಿ ಬಿದ್ದವರು ಬಳಿಕ ಮನೆಗೆ ಬಂದು ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದರು. ಸೆ 4 ರಂದು ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಸೊಂಟ ನೋವಾಗಿದ್ದರಿಂದ ನೋವು ಉಲ್ಬಣಗೊಂಡು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಬೆಳಿಗ್ಗೆ 10 ಗಂಟೆಗೆ ಚಿಕಿತ್ಸೆಯ ಬಗ್ಗೆ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಸಂದೀಪನನ್ನು ಅಂಬುಲೆನ್ ವಾಹನದಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಸಂದೀಪನಿಗೆ ಜಾಂಡಿಸ್ ಹಾಗೂ ಲಿವರ್ ಸಂಬಂಧಿ ಖಾಯಿಲೆ ಇರುವುದಾಗಿ ತಿಳಿಸಿ ಆತನನ್ನು ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಂದೀಪ್ ರಾತ್ರಿ 9 ಗಂಟೆ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment