ದೆಹಲಿ : ರಾಷ್ಟ್ರಮಟ್ಟದ ಭಾರತ್ ಸ್ಕೌಟ್ ಅಂಡ್ ಗೈಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪೂರ್ತಿದಾಯಕ ಭಾಷಣದ ಮೂಲಕ ರಾಷ್ಟ್ರದ ಗಮನ ಸೆಳೆದ ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ - Karavali Times ದೆಹಲಿ : ರಾಷ್ಟ್ರಮಟ್ಟದ ಭಾರತ್ ಸ್ಕೌಟ್ ಅಂಡ್ ಗೈಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪೂರ್ತಿದಾಯಕ ಭಾಷಣದ ಮೂಲಕ ರಾಷ್ಟ್ರದ ಗಮನ ಸೆಳೆದ ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ - Karavali Times

728x90

1 September 2025

ದೆಹಲಿ : ರಾಷ್ಟ್ರಮಟ್ಟದ ಭಾರತ್ ಸ್ಕೌಟ್ ಅಂಡ್ ಗೈಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪೂರ್ತಿದಾಯಕ ಭಾಷಣದ ಮೂಲಕ ರಾಷ್ಟ್ರದ ಗಮನ ಸೆಳೆದ ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್

ಮಂಗಳೂರು, ಸೆಪ್ಟೆಂಬರ್ 01, 2025 (ಕರಾವಳಿ ಟೈಮ್ಸ್) : ನವ ದೆಹಲಿಯಲ್ಲಿ ನಡೆದ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಇದರ ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಭಾಗವಹಿಸಿದರು.

ಸುಮಾರು 5 ಸಾವಿರ ಮಂದಿ ಸಭಿಕರ ಸಮ್ಮುಖದಲ್ಲಿ ಅವರು ಮಾಡಿದ ಸ್ಫೂರ್ತಿದಾಯಕ ಭಾಷಣ ರಾಷ್ಟ್ರದ ಯುವಜನತೆ ಮತ್ತು ನಾಯಕರ ಗಮನ ಸೆಳೆದಿದೆ. ಸಮಾರಂಭದಲ್ಲಿ ಮಾತನಾಡಿದ ಸ್ಪೀಕರ್ ಖಾದರ್, ಉತ್ಸಾಹಿ, ಆತ್ಮವಿಶ್ವಾಸಿ ಮತ್ತು ದೃಢ ಮನಸ್ಸಿನ ಯುವ ಸಮಾವೇಶವನ್ನು ನೋಡಿ ನನಗೆ ಭವಿಷ್ಯದ ಭಾರತದ ಬಗ್ಗೆ ಅಪಾರ ಭರವಸೆ ಮತ್ತು ಹೆಮ್ಮೆ ಎನಿಸುತ್ತಿದೆ. ಏಕೆಂದರೆ, ನೀವು ಖಂಡಿತವಾಗಿಯೂ ವಿಶ್ವದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ಪ್ರಗತಿಶೀಲ ರಾಷ್ಟ್ರವಾಗಿ ಮಾನ್ಯತೆ ಪಡೆಯಲಿರುವ ಶ್ರೇಷ್ಠ ಭಾರತದ ವಾಸ್ತುಶಿಲ್ಪಿಗಳಾಗಿದ್ದೀರಿ ಎಂದರು. 

“ಸ್ಕೌಟಿಂಗ್ ಮತ್ತು ಗೈಡಿಂಗ್ ಸೇವೆ, ಸಂಸ್ಕಾರ ಮತ್ತು ಸಹಯೋಗ ಎನ್ನುವ ಮೂರು ಸುಂದರ ಸಂಗಮವಾಗಿದೆ. ಈ ಮೂರು ಸ್ಥಂಭಗಳು ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರಬಲ ಚೌಕಟ್ಟಿನಂತೆ ಕಾರ್ಯನಿರ್ವಹಿಸುತ್ತವೆ. ಇದು ‘ಸ್ವಯಂ’ ದಿಂದ ‘ಇತರರ ಸೇವೆ’ಗೆ ಇರುವ ಒಂದು ಪರಿವರ್ತನಾಶೀಲ ಪಯಣವಾಗಿದೆ. ವಿದ್ಯಾರ್ಥಿಗಳನ್ನು ಅಧ್ಯಯನ ಕೊಠಡಿಯಾಚೆಗೆ ಕರೆದೊಯ್ಯುವ, ಅವರನ್ನು ಸಮಾಜದ ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತಿಸುವ ಪಯಣವಾಗಿದೆ. ಭಾರತದ ನಾರಿ ಶಕ್ತಿಯನ್ನು ಪ್ರತಿನಿಧಿಸುವ ನಮ್ಮ ಹೆಮ್ಮೆಯ ಯುವತಿಯರು ಕೂಡ ನಾಯಕತ್ವದಲ್ಲಿ ಮುನ್ನಡೆಯುವುದು, ಅನ್ವೇಷಣೆಗೆ ಮತ್ತು ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನೀವು ನಿಜವಾಗಿಯೂ ಲಕ್ಷಾಂತರ ಯುವತಿಯರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದೀರಿ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. 

ಪ್ರಶಸ್ತಿ ವಿಜೇತರಿಗೆ ಶುಭ ಕೋರುತ್ತಾ “ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್‍ಗಳ ಸೇವೆ ಮತ್ತು ನಾಯಕತ್ವದಲ್ಲಿನ ಶ್ರೇಷ್ಠತೆಯನ್ನು ಗುರುತಿಸುವ ಈ ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಸಮಾರಂಭವು ಕೇವಲ ಒಂದು ಔಪಚಾರಿಕ ಸಮಾರಂಭವಲ್ಲ, ಇದು ಅವರ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಗುರುತಿಸಿ, ಸಮಾಜಕ್ಕಾಗಿ ಅವರು ಇನ್ನಷ್ಟು ತಮ್ಮ ಸೇವಾ ಶಕ್ತಿ ಮತ್ತು ಕೌಶಲ್ಯವನ್ನು ಧಾರೆಯೆರೆದು, ಆ ಮೂಲಕ ಇನ್ನೂ ಹಲವಾರು ಜನರಿಗೆ ಪ್ರೇರಣೆಯಾಗಲಿ ಎನ್ನುವ ಉತ್ತಮ ಆಶಯದೊಂದಿಗೆ ನಡೆಸಲಾಗುತ್ತದೆ ಎಂದರು.

ತಮ್ಮ ಶಾಲಾ ದಿನಗಳನ್ನು ನೆನಪಿಸಿದ ಸ್ಪೀಕರ್ “ನಾನು 5ನೇ ತರಗತಿಯಿಂದ 10ನೇ ತರಗತಿಯವರೆಗೆ ಐದು ವರ್ಷಗಳ ಕಾಲ ಸ್ಕೌಟ್ ಗೈಡ್ ಆಗಿರುವುದು ನನ್ನ ವ್ಯಕ್ತಿತ್ವವನ್ನು ಮಾತ್ರವಲ್ಲ, ಮಾನವೀಯತೆ, ಸಹನ ಶೀಲತೆ ಮತ್ತು ಗುರಿಯೊಂದಿಗೆ ಮುನ್ನಡೆಯುವ ನಾಯಕತ್ವ ಸಾಮಥ್ರ್ಯವನ್ನೂ ನನಗೆ ನೀಡಿತು. ಸ್ಕೌಟಿಂಗ್ ನನಗೆ ಶಿಸ್ತು, ತಂಡದಲ್ಲಿ ಕೆಲಸ ಮಾಡುವುದು, ಸಮಾಜ ಸೇವೆ, ಸವಾಲುಗಳನ್ನು ಹೇಗೆ ಎದುರಿಸುವುದು ಮತ್ತು ಕಠಿಣ ಸಂದರ್ಭಗಳಲ್ಲಿ ಶಾಂತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಕಲಿಸಿತು. ಇಂದಿನ ಸಮಾಜವು ತಪ್ಪು ಮಾಹಿತಿ, ಧ್ರುವೀಕರಣ ಮತ್ತು ಅಸಮಾನತೆಯಂತಹ ಸವಾಲುಗಳೊಂದಿಗೆ ಹೋರಾಡುತ್ತಿರುವ ಈ ಕಾಲಘಟ್ಟದಲ್ಲಿ, ಸ್ಕೌಟ್ ಗೈಡ್ಸ್ ಸಾಮಾಜಿಕ ಸಮಾನತೆ, ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆ ಮುಂತಾದ ಮೌಲ್ಯಗಳೊಂದಿಗೆ ವಿದ್ಯಾರ್ಥಿ ನಾಯಕರನ್ನು ರೂಪಿಸುವುದು ಶ್ಲಾಘನೀಯವಾಗಿದೆ.” ಎಂದರು. 

ಒಳ್ಳೆಯ ವೈದ್ಯರಾಗಲು ವೈದ್ಯಕೀಯ ಕಾಲೇಜುಗಳಿವೆ, ಉತ್ತಮ ಇಂಜಿನಿಯರ್ ಆಗಲು ಎಂಜಿನಿಯರಿಂಗ್ ಕಾಲೇಜುಗಳಿವೆ. ಹಾಗೆಯೆ, ಉತ್ತಮ ಸತ್ಪ್ರಜೆಯಾಗಲು ಸ್ಕೌಟ್ ಅಂಡ್ ಗೈಡ್ಸ್ ಉತ್ತಮ ವೇದಿಕೆಯಾಗಿದೆ ಎಂದ ಸ್ಪೀಕರ್ ಸ್ಕೌಟ್, ಗೈಡ್, ರೇಂಜರ್ಸ್ ಮತ್ತು ರೋವರ್ಸ್ ಆಗಿ ಮಾಡುವ ಸಣ್ಣ ಪರಿವರ್ತನೆಯೂ ಸಹ ಸಮಾಜದಲ್ಲಿ ಬದಲಾವಣೆಯ ಅಲೆಯಾಗಿ ಪರಿಣಮಿಸುತ್ತದೆ. ಅದು ಮರವನ್ನು ನೆಡುವುದಾಗಲಿ, ಜನನಿಬಿಡ ರಸ್ತೆ ದಾಟಲು ಯಾರಿಗಾದರೂ ಸಹಾಯ ಮಾಡುವುದಾಗಲಿ ಅಥವಾ ನ್ಯಾಯದ ಪರವಾಗಿ ಹೋರಾಡುವುದಿರಲಿ ಎಲ್ಲವೂ ಸಾಮಾಜಿಕ ಪರಿವರ್ತನೆಯ ಶಕ್ತಿಯನ್ನು ಪ್ರತಿಬಿಂಬಿತವಾಗುತ್ತದೆ. ಸ್ಕೌಟ್ ಮತ್ತು ಗೈಡ್ ಮೂಲ ತತ್ವವು ನಮಗೆ ಇತರರನ್ನು ಗೌರವಿಸಲು, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಲು ಮತ್ತು ಸಾಮರಸ್ಯಕ್ಕಾಗಿ ಕೆಲಸ ಮಾಡಲು ಕಲಿಸುತ್ತದೆ. ಆ ಮೂಲಕ ನಮ್ಮ ವ್ಯಕ್ತಿಗತವಾದ ಬೆಳವಣಿಗೆಯ ಜೊತೆಗೆ ನಿಸ್ವಾರ್ಥ ಸೇವೆ, ಸಮಗ್ರತೆ ಮತ್ತು ಶಿಸ್ತಿನಿಂದ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ ಇತರರಿಗೆ ಪ್ರೇರಣೆಯೂ ಮತ್ತು ಮಾದರಿಯೂ ಆಗುತ್ತೇವೆ ಎಂದರು. 

ಸಮಾರಂಭದಲ್ಲಿ ಕೇಂದ್ರ ಕಾರ್ಮಿಕ, ಉದ್ಯೋಗ ಮತ್ತು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮಾಜಿ ಮುಖ್ಯ ರಾಷ್ಟ್ರೀಯ ಆಯುಕ್ತ ಡಾ. ಕೆ.ಕೆ. ಖಂಡೇಲ್ವಾಲ್, ಛತ್ತೀಸಘಡದ ಮಾಜಿ ಸಚಿವ ಹಾಗೂ ಸಂಸದ ಬ್ರಿಜ್ ಮೋಹನ್ ಅಗರ್ವಾಲ್, ದೆಹಲಿ ಸಂಸದÀ ಮನೋಜ್ ತಿವಾರಿ, ಮಾಜಿ ನ್ಯಾಯಧೀಶರಾದ ಜಾವೇರಿಯ ಹಾಗೂ ಗೀತಾಂಜಲಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಹೆಚ್ಚುವರಿ ಸಹಾಯಕ ಆಯುಕ್ತ ಎಂ.ಎ ಖಾಲಿದ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಷ್ಟೀಯ ಮಹಾ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ದೆಹಲಿ : ರಾಷ್ಟ್ರಮಟ್ಟದ ಭಾರತ್ ಸ್ಕೌಟ್ ಅಂಡ್ ಗೈಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪೂರ್ತಿದಾಯಕ ಭಾಷಣದ ಮೂಲಕ ರಾಷ್ಟ್ರದ ಗಮನ ಸೆಳೆದ ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ Rating: 5 Reviewed By: karavali Times
Scroll to Top