ನವದೆಹಲಿ, ಅಕ್ಟೋಬರ್ 06, 2025 (ಕರಾವಳಿ ಟೈಮ್ಸ್) : ಬಿಹಾರ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಫಿಕ್ಸ್ ಮಾಡಿದೆ. ನವೆಂಬರ್ 6 ಹಾಗೂ 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
ನವದೆಹಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು 243 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ರಾಜ್ಯದಲ್ಲಿ 7.43 ಕೋಟಿ ಮತದಾರರಿದ್ದಾರೆ. ಈ ಪೈಕಿ 3.29 ಕೋಟಿ ಪುರುಷ ಮತದಾರರಿದ್ದರೆ, 3.50 ಕೋಟಿ ಮಹಿಳಾ ಮತದಾರರಿದ್ದಾರೆ. 14 ಲಕ್ಷ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ನವೆಂಬರ್ 6 ರಂದು 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದರೆ, ನ 11 ರಂದು 122 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ ಎಂದರು.
ಮೊದಲ ಹಂತದ ಚುನಾವಣೆಗೆ ಅಕ್ಟೋಬರ್ 10 ರಂದು ಅಧಿಸೂಚನೆ ಪ್ರಕಟವಾಗಲಿದ್ದು, 2ನೇ ಹಂತದ ಚುನಾವಣೆಗೆ ಅಕ್ಟೋಬರ್ 13 ರಂದು ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂದ ಅವರು, ಮೊದಲ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 ಕೊನೆಯ ದಿನವಾಗಿದ್ದು, 2ನೇ ಹಂತದ ಕ್ಷೇತ್ರಗಳಿಗೆ ಅಕ್ಟೋಬರ್ 21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್ 18 ಮತ್ತು ಅಕ್ಟೋಬರ್ 21 ರಂದು ಕ್ರಮವಾಗಿ ಮೊದಲ ಮತ್ತು 2ನೇ ಹಂತದ ಕ್ಷೇತ್ರಗಳಿಗೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಲಿದೆ. ಅಕ್ಟೋಬರ್ 20 ಹಾಗೂ 23 ಕ್ರಮವಾಗಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನವೆಂಬರ್ 6ರಂದು ಚುನಾವಣೆ ನಡೆಯಲಿದೆ. ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದವರು ತಿಳಿಸಿದರು.
ಬಿಹಾರದಲ್ಲಿರುವ 243 ವಿಧಾನಸಭಾ ಕ್ಷೇತ್ರಗಳ ಪೈಕಿ 203 ಸಾಮಾನ್ಯ ಕ್ಷೇತ್ರಗಳಾಗಿದ್ದು, 2 ಎಸ್ಟಿ ಹಾಗೂ 38 ಎಸ್ಸಿ ಮೀಸಲು ಕ್ಷೇತ್ರಗಳಾಗಿವೆ. ಬಿಹಾರದಲ್ಲಿ ಒಟ್ಟು 7.43 ಕೋಟಿ ಮತದಾರರಿದ್ದಾರೆ. ಈ ಪೈಕಿ 3.92 ಕೋಟಿ ಪುರುಷ ಮತದಾರರು, 3.50 ಕೋಟಿ ಮಹಿಳಾ ಮತದಾರರು, 1,725 ತೃತೀಯಲಿಂಗಿ ಮತದಾರರಿದ್ದಾರೆ, 14.01 ಲಕ್ಷ ಫಸ್ಟ್ ಟೈಮ್ ವೋಟರ್ಸ್ ಇದ್ದಾರೆ. ಒಟ್ಟು 90,712 ಬೂತ್‍ಗಳನ್ನು ನಿರ್ಮಾಣ ಮಾಡಲಾಗಿದ್ದು, ನಗರದಲ್ಲಿ 13,911 ಹಾಗೂ ಗ್ರಾಮೀಣ ಭಾಗದಲ್ಲಿ 76,801 ಬೂತ್ ಗಳಿರಲಿವೆ. ಎಲ್ಲಾ ಬೂತ್ ಗಳಲ್ಲೂ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದ ಅವರು ಒಟ್ಟಾರೆ 90,712 ಬೂತ್ ಮಟ್ಟದ ಅಧಿಕಾರಿಗಳು, 243 ಇ ಆರ್ ಓ (ಮತದಾರರ ನೋಂದಣಾಧಿಕಾರಿ), 38 ಡಿ ಇ ಒ (ಜಿಲ್ಲಾ ಚುನಾವಣಾ ಅಧಿಕಾರಿ) ಬಳಿಕ ಮುಖ್ಯ ಚುನಾವಣಾ ಆಯುಕ್ತರು ಕರ್ತವ್ಯದಲ್ಲಿ ಇರಲಿದ್ದಾರೆ. ಮತದಾರರಿಗೆ ಯಾವುದೇ ಗೊಂದಲಗಳಿದ್ದರೂ 1950 ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಈ ಬಾರಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‍ಡಿಎ ಹಾಗೂ ಆರ್ ಜೆ ಡಿ ನೇತೃತ್ವದ ಮಹಾ ಘಟಬಂಧನ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎನ್‍ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದ್ದರೆ ವಿರೋಧ ಪಕ್ಷ 111 ಸ್ಥಾನಗಳನ್ನು ಹೊಂದಿದೆ. ಇನ್ನುಳಿದಂತೆ ಬಿಜೆಪಿ 80, ಜೆಡಿ(ಯು) 45, ಎಚ್‍ಎಎಂ(ಎಸ್) 4 ಮತ್ತು ಇಬ್ಬರು ಸ್ವತಂತ್ರರು ಎನ್ ಡಿ ಎ ಗೆ ಬಲ ನೀಡಿದರೆ ಆರ್‍ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಸ್ಥಾನ ಹೊಂದಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಬಿಹಾರದಲ್ಲಿ 2020ರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆದಿತ್ತು. ಎನ್ ಡಿ ಎ ಜಯಗಳಿಸಿದ ಬಳಿಕ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದರು. ಹೀಗಿದ್ದರೂ 2022ರಲ್ಲಿ ನಿತೀಶ್ ಕುಮಾರ್ ಎನ್ ಡಿ ಎ ತೊರೆದು ಆರ್ ಜೆ ಡಿ ನೇತೃತ್ವದ ‘ಮಹಾ ಘಟಬಂಧನ್’ ಜೊತೆ ಸೇರಿ ಸರಕಾರ ರಚಿಸಿದ್ದರು. 2024 ರಲ್ಲಿ ಮತ್ತೆ ನಿತೀಶ್ ಕುಮಾರ್ ಮಹಾ ಘಟಬಂಧನ್ ಜೊತೆಗಿನ ಸಂಬಂಧ ಕಡಿದುಕೊಂಡು ಎನ್ ಡಿ ಎ ಜೊತೆಗೆ ಕೈಜೋಡಿಸಿ ಅಧಿಕಾರಕ್ಕೆ ಏರಿದ್ದರು.













0 comments:
Post a Comment