ಪುತ್ತೂರು, ಅಕ್ಟೋಬರ್ 14, 2025 (ಕರಾವಳಿ ಟೈಮ್ಸ್) : ಗಲಾಟೆ ಬಿಡಿಸಲು ಹೋದ ವ್ಯಕ್ತಿಗೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ಎಂಬಲ್ಲಿ ಅ 11 ರಂದು ರಾತ್ರಿ ನಡೆದಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಂಜನ್ ರೈ ಮತ್ತು ಪ್ರವೀಶ್ ನಾಯರ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಶ್ರವಣ್ ಕುಮಾರ್ ಎಂಬವರು ಪುತ್ತೂರು ಪೊಲೀಸರಿಗೆ ದೂರು ನೀಡಿದ್ದು, ಅ 11 ರಂದು ರಾತ್ರಿ ಸುಮಾರು 10.30 ರ ವೇಳೆಗೆ ಅರಿಯಡ್ಕ ಗ್ರಾಮದ, ಕೌಡಿಚ್ಚಾರ್ ಎಂಬಲ್ಲಿರುವ ನವೀನ್ ಪಿ ಜಿ ಅವರ ಜನರಲ್ ಸ್ಟೋರಿನಲ್ಲಿ ಮನೆಗೆ ಬೇಕಾದ ಅಗತ್ಯ ವಸ್ತಗಳನ್ನು ಖರೀದಿಸಲು ಹೋಗಿದ್ದು, ಆ ಸಮಯ ಅಲ್ಲಿ ಸಂಜನ್ ರೈ, ಪ್ರವೀಶ್ ನಾಯರ್, ರೇವಂತ್, ವಿನೀತ್ ಅವರು ಅಂಗಡಿಯ ಮಾಲಿಕ ನವೀನ್ ಪಿ ಜಿ ಅವರಲ್ಲಿ ಜಗಳ ಮಾಡುತ್ತಿರುವಾಗ ಶ್ರವಣ್ ಕುಮಾರ್ ಏಕೆ ಅವನಿಗೆ ಹೊಡೆಯುತ್ತೀರಾ ಎಂದು ಕೇಳಿದಾಗ ಸಂಜನ್ ರೈ, ಅವಾಚ್ಯವಾಗಿ ಬೈದು ಕೈಯಿಂದ ಎಡಕೆನ್ನೆಗೆ ಹೊಡೆದಿರುತ್ತಾನೆ ಹಾಗೂ ಅಲ್ಲಿಯೇ ಇದ್ದ ಖಾಲಿ ಸೋಡಾ ಬಾಟ್ಲಿಯಿಂದ ತಲೆಗೆ ಬಲವಾಗಿ ಹೊಡೆದಿರುವುದಾಗಿದೆ. ನಂತರ ಸಂಜನ್ ರೈ ಹಾಗೂ ಆತನ ಜೊತೆಗಿದ್ದವರು ಮುಖಕ್ಕೆ ಬಲ ಕೋಲು ಕೈಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಆ ಸಮಯ ಗೆಳೆಯರಾದ ಸಿಂಚನ್, ನವೀನ್ ಪಿ ಜಿ ಅವರು ಆರೋಪಿಗಳು ಹಲ್ಲೆ ಮಾಡುವುದನ್ನು ತಡೆದಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸಂಜನ್ ರೈ ಮತ್ತು ಪ್ರವೀಶ್ ನಾಯರ್ ಅವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.














0 comments:
Post a Comment