ಬಂಟ್ವಾಳ, ಅಕ್ಟೋಬರ್ 13, 2025 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಜಂಕ್ಷನ್ನಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಮಾದರಿಯ ದೂರದ ಊರಿಗೆ ಸಂಚರಿಸುವ ಎಲ್ಲಾ ಸರಕಾರಿ ಬಸ್ಸುಗಳನ್ನು ನಿಲುಗಡೆಗೊಳಿಸುವಂತೆ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಮಂಗಳೂರು ವಿಭಾಗದ ಹಿರಿಯ ನಿಯಂತ್ರಣಾಧಿಕಾರಿ (ಕೆ ಎಸ್ ಆರ್ ಟಿ ಸಿ ಮಂಗಳೂರು ಡಿಸಿ) ಆದೇಶ ಹೊರಡಿಸಿದ್ದಾರೆ.
ಮಾರಿಪಳ್ಳ ಜಂಕ್ಷನ್ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಸೀದಿ, ದೇವಸ್ಥಾನ, ಹಿರಿಯ-ಕಿರಿಯ ಪ್ರಾಥಮಿ ಹಾಗೂ ಪ್ರೌಢಶಾಲೆಗಳಿಗೆ ತೆರಳುವ ಎಲ್ಲರಿಗೂ ಅನುಕೂಲಕರವಾದ ಪ್ರದೇಶವಾಗಿದ್ದು, ಅಲ್ಲದೆ ಈ ಜಂಕ್ಷನ್ನಿನಿಂದ ಹಲವು ಒಳ ಪ್ರದೇಶಗಳಿಗೂ ಸಂಪರ್ಕ ಸಾಧಿಸಲು ಅವಕಾಶ ಇದ್ದು, ಈ ನಿಟ್ಟಿನಲ್ಲಿ ಇಲ್ಲಿ ಸರಕಾರಿ ಬಸ್ ನಿಲುಗಡೆ ಅತೀ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ಮಾರಿಪಳ್ಳ ಜಂಕ್ಷನ್ನಿನಲ್ಲಿ ಸರಕಾರಿ ವೇಗದೂತ ಸಹಿತ ಎಲ್ಲಾ ಮಾದರಿಯ ಬಸ್ಸುಗಳಿಗೆ ನಿಲುಗಡೆ ನೀಡುವಂತೆ ಜಿ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರ ನೇತೃತ್ವದ ನಿಯೋಗ ಇತ್ತೀಚೆಗೆ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಹಾಗೂ ಕೆ ಎಸ್ ಆರ್ ಟಿ ಸಿ ಮಂಗಳೂರು ಡೀಸಿ ಅವರಿಗೂ ಮನವಿ ಸಲ್ಲಿಸಿದ್ದರು.
ಇದೀಗ ಸಾರ್ವಜನಿಕ ಮನವಿಗೆ ಸ್ಪಂದಿಸಿದ ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಅವರು ಮಾರಿಪಳ್ಳ ಜಂಕ್ಷನ್ನಿನಲ್ಲಿ ನಿಗಮದ ಎಲ್ಲಾ ಮಾದರಿಯ ಸಾರಿಗೆಯನ್ನು ನಿಲುಗಡೆ ನೀಡಿ ಪ್ರಯಾಣಿಕರನ್ನು ಹತ್ತಿಸಿ/ ಇಳಿಸಿಕೊಂಡು ತೆರಳುವಂತೆ ಅ 8 ರಂದು ಆದೇಶಿಸಿದ್ದಾರೆ.














0 comments:
Post a Comment