ಬಂಟ್ವಾಳ, ಅಕ್ಟೋಬರ್ 30, 2025 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮ ಪಂಚಾಯತಿಯ ದ್ವಿತೀಯಾರ್ಧದ ಆಡಳಿತದ ಪ್ರಥಮ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಅ 30 ರಂದು ಗುರುವಾರ ನಡೆಯಿತು.
ಸಭೆಯಲ್ಲಿ ಫರಂಗಿಪೇಟೆ ಜಂಕ್ಷನ್ನಿನಲ್ಲಿ ಹೆದ್ದಾರಿ ಬದಿಯಲ್ಲೇ ಕಸ-ತ್ಯಾಜ್ಯ ಎಸೆಯುವ ಬಗ್ಗೆ ಸದಸ್ಯರು ಗಮನ ಸೆಳೆದರು. ಈ ಬಗ್ಗೆ ಪ್ರತಿಕ್ರಯಿಸಿದ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು, ಈಗಾಗಲೇ ಪುದು ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆ ಕಸ-ತ್ಯಾಜ್ಯ ಸಂಗ್ರಹಕ್ಕೆ ಜಿಲ್ಲೆಯಲ್ಲೇ ಪ್ರಥಮ ಬಾರಿ ಎಂಬಂತೆ ವಾಹನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಜನ ತಮ್ಮ ಮನೆ, ಅಂಗಡಿಗಳ ಕಸ-ತ್ಯಾಜ್ಯಗಳನ್ನು ಸಂಗ್ರಹದ ವಾಹನಕ್ಕೇ ನೀಡಿ ಸಹಕರಿಸಬೇಕು. ಪಂಚಾಯತ್ ವ್ಯವಸ್ಥೆಯನ್ನೂ ಮೀರಿ ಯಾರಾದರೂ ಗ್ರಾಮಸ್ಥರಾಗಲೀ, ಹೊರಗಿನವರಾಗಲೀ ಹೆದ್ದಾರಿ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ-ತ್ಯಾಜ್ಯಗಳನ್ನು ಎಸೆಯುವುದು ಕಂಡು ಬಂದರೆ ಗುಪ್ತವಾಗಿ ಆಧಾರ ಸಹಿತ ಮಾಹಿತಿ ನೀಡಿದರೆ ಅವರಿಗೆ 1 ಸಾವಿರ ರೂಪಾಯಿ ಬಹುಮಾ ನೀಡಲಾಗುವುದು. ಮಾಹಿತಿ ನೀಡಿದವರ ವಿವರ ಗುಪ್ತವಾಗಿಡಲಾಗುವುದು. ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಫರಂಗಿಪೇಟೆ ಜಂಕ್ಷನ್ನಿನಲ್ಲಿರುವ ಹೆದ್ದಾರಿ ಡಿವೈಡರ್ ಕಾರಣದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಂಗ್ ಸೈಡಲ್ಲಿ ಸಂಚಾರ ನಡೆಸಿದರೆ ಪೊಲೀಸರು ದಂಡ ವಿಧಿಸುತ್ತಾರೆ ಎಂಬ ಸದಸ್ಯರ ಸಲಹೆಗೆ ಸ್ಪಂದಿಸಿ ಪ್ರತಿಕ್ರಯಿಸಿದ ಅಧ್ಯಕ್ಷರು ಫರಂಗಿಪೇಟೆ ಜಂಕ್ಷನ್ನಿನ ಹೆದ್ದಾರಿ ಡಿವೈಡರನ್ನು ಬಂದ್ ಮಾಡಿ ಹಳೆ ರಸ್ತೆಯ ಎರಡೂ ಬದಿಗಳ ತುದಿಗಳಲ್ಲಿ ಡಿವೈಡರ್ ಓಪನ್ ಮಾಡಬೇಕು ಎಂಬ ಬಗ್ಗೆ ಈಗಾಗಲೇ ಹೆದ್ದಾರಿ ಇಲಾಖೆಗೆ ಹಾಗೂ ಜಿಲ್ಲಾ ಎಸ್ಪಿ ಅವರಿಗೆ ಜಿ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಅವರ ನೇತೃತ್ವದ ನಿಯೋಗದಿಂದ ಮನವಿ ಮಾಡಲಾಗಿದೆ. ಎಸ್ಪಿ ಅವರು ಈ ಬೇಡಿಕೆಗೆ ಅಸ್ತು ಎಂದಿದ್ದು ಹೆದ್ದಾರಿ ಇಲಾಖೆ ಇನ್ನೂ ಸ್ಪಂದಿಸಿಲ್ಲ. ಈ ಬಗ್ಗೆ ಮತ್ತೆ ಹೆದ್ದಾರಿ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಫರಂಗಿಪೇಟೆ ಬಸ್ ನಿಲ್ದಾಣದಲ್ಲಿ ಹಲವು ಸರಕಾರಿ ಬಸ್ಸುಗಳ ಚಾಲಕರು ನಿಲ್ಲಿಸದೆ ಇರುವುದರಿಂದ ಪರೀಕ್ಷಾ ಸಮಯ ಸಹಿತ ಇತರ ಸಮಯಗಳಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಫರಂಗಿಪೇಟೆ ಜಂಕ್ಷನ್ನಿನ ಬಸ್ಸು ನಿಲ್ದಾಣದ ಬಳಿ ಕೆ ಎಸ್ ಆರ್ ಟಿ ಸಿ ಟಿಸಿ ಪಾಯಿಂಟ್ ತೆರೆಯಲು ಈಗಾಗಲೇ ಅಧಿಕಾರಿಗಳಿಗೆ ಜಿ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಅವರ ನೇತೃತ್ವದ ನಿಯೋಗದಿಂದ ಮನವಿ ನೀಡಲಾಗಿದ್ದು, ಈ ಬಗ್ಗೆ ಸ್ಥಳೀಯ ಶಾಸಕರೂ ಆಗಿರುವ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರು ಕೂಡಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಬಸ್ಸುಗಳು ಹೆದ್ದಾರಿ ಬಿಟ್ಟು ನಿಲ್ಲಲು ಹಾಗೂ ಟಿಸಿ ಪಾಯಿಂಟ್ ನಿರ್ಮಾಣಕ್ಕೆ ಸಹಕಾರಿಯಾಗುವಂತೆ ಬಸ್ಸು ನಿಲ್ದಾಣದ ಪರಿಸರದಲ್ಲಿ ಫುಟ್ ಪಾತ್ ಆಕ್ರಮಿಸಿಕೊಂಡು ಅನಧಿಕೃವಾಗಿ ನಿರ್ಮಾಣಗೊಂಡಿರುವ 2-3 ಅಂಗಡಿಗಳ ತೆರವಿಗೆ ಅಂಗಡಿ ಮಾಲಕರಿಗೆ ಕೋರಲಾಗುವುದು. ಸ್ಪಂದಿಸದಿದ್ದಲ್ಲಿ ತಕ್ಷಣ ನೋಟೀಸು ಜಾರಿಗೊಳಿಸಿ ಅಧಿಕೃತವಾಗಿ ತೆರವುಗೊಳಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಬಸ್ಸು ನಿಲ್ದಾಣದ ಬಳಿ ಅನಧಿಕೃತವಾಗಿ ವಾಹನಗಳ ಪಾರ್ಕಿಂಗಿಗೆ ಕಡಿವಾಣ ಹಾಕಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಲಾಗುವುದು ಹಾಗೂ ಸಮೀಪದ ಮೀನು ಮಾರುಕಟ್ಟೆ ಬಳಿ ಬೈಕ್ ಪಾರ್ಕಿಂಗ್ ಪಾಯಿಂಟ್ ನಿರ್ಮಿಸಲಾಗುವುದು ಎಂದು ತೀರ್ಮಾನಿಸಲಾಯಿತು.
ಫರಂಗಿಪೇಟೆ ಪೇಟೆಯನ್ನು ಸುಂದರೀಕರಣಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರೂ ವಿಧಾನಸಭಾಧ್ಯಕ್ಷರೂ ಆಗಿರುವ ಡಾ ಯು ಟಿ ಖಾದರ್ ಅವರಿಗೆ ಮನವಿ ನೀಡಲು ಸಭೆ ನಿರ್ಣಯಿಸಿದೆ. ಪುದು ಗ್ರಾಮ ಪಂಚಾಯತ್ ವ್ಯಾಪ್ತಿ ಆರಂಭದಲ್ಲಿ ಹೆದ್ದಾರಿಯ ಎರಡೂ ಕಡೆಗಳಲ್ಲಿ ಸ್ವಾಗತ ಕಮಾನು, ಟ್ರಾಫಿಕ್ ಕಿರಿಕಿರಿಗೆ ಶಾಶ್ವತ ಪರಿಹಾರ, ವಾಹನ ಪಾರ್ಕಿಂಗಿಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆ, ತ್ಯಾಜ್ಯ ಸಮಸ್ಯೆಗೂ ಶಾಶ್ವತ ಪರಿಹಾರ ಇವೇ ಮೊದಲಾದ ವ್ಯವಸ್ಥೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಸಲ್ಲಿಸಿ ಶೀಘ್ರ ಅನುಷ್ಠಾನಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತಿಳಿಸಿದರು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ರುಕ್ಸಾನ ಬಾನು, ಪಿಡಿಒ ಡಾ ಸ್ಮೃತಿ ಯು, ಕಾರ್ಯದರ್ಶಿ ಶ್ರೀಮತಿ ಕವಿತಾ, ಪಂಚಾಯತ್ ಸದಸ್ಯರುಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.


















0 comments:
Post a Comment