ಬಂಟ್ವಾಳ, ಅಕ್ಟೋಬರ್ 27, 2025 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರ ಮತ್ತು ರಾಜ್ಯದಿಂದ ಸಬ್ಸಿಡಿ ಇರುವ ಹಲವಾರು ರೀತಿಯ ಸಾಲ ಸೌಲಭ್ಯಗಳಿವೆ. ಸಿಗುವ ಸಾಲ ಸೌಲಭ್ಯವನ್ನು ಸರಿಯಾಗಿ ಬಳಸಿಕೊಂಡು ಮರು ಪಾವತಿಯನ್ನು ವ್ಯವಸ್ಥಿತವಾಗಿ ಮಾಡಿದರೆ ಬ್ಯಾಂಕುಗಳು ಕರೆದು ಮತ್ತೆ ಸಾಲ ಕೊಡುತ್ತದೆ. ತಮ್ಮ ಬ್ಯಾಂಕ್ ಖಾತೆ ಎನ್ ಪಿ ಎ ಮಾಡಲಿಕ್ಕೆ ಅವಕಾಶ ಮಾಡಬಾರದು. ಸಿಬಿಲ್ ವರದಿಯಿಂದ ಯಾವುದೇ ಸಾಲಗಾರನ ಸಂಪೂರ್ಣ ಮಾಹಿತಿ ಬರುತ್ತದೆ ಎಂದು ಕೆನರಾ ಬ್ಯಾಂಕ್ ಸೀನಿಯರ್ ಮೆನೇಜರ್ ಪುರಂದರ ಹೇಳಿದರು.
ಬಿ ಸಿ ರೋಡಿನ ಪೆÇಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ಅ 26 ರಂದು ನಡೆದ ‘ಯುವ ಪ್ರೇರಣೆ-2025 ಬ್ಯಾಂಕಿಂಗ್ ಸಾಲ ಮತ್ತು ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಯಾವುದೇ ಯೋಜನೆ ಜಾರಿಯಾಗಬೇಕಿದ್ದರೆ ಜನರು ಬ್ಯಾಂಕ್ ಖಾತೆ ಹೊಂದಿರಬೇಕು. 2014ರಲ್ಲಿ ಜನ್ ಧನ್ ಖಾತೆಯಿಂದಾಗಿ ಸರಕಾರದಿಂದ ಬರುವ ಎಲ್ಲಾ ರೀತಿಯ ಯೋಜನೆಯ ಹಣ ಅವರ ಖಾತೆಗೆ ಬೀಳುತ್ತದೆ. ಆತ್ಮ ನಿರ್ಭರ್ ಭಾರತ್ ಯೋಜನೆಯಿಂದ ಸ್ವ ಉದ್ಯೋಗಿಗಳು ತುಂಬಾ ಹೆಚ್ಚಾಗಿದ್ದಾರೆ ಎಂದರು.
ಉದ್ಯಮಿ ಗಂಗಾಧರ ಸೇರಾ ಮಾತನಾಡಿ, ಯಾವುದೇ ಉದ್ಯಮ ಆರಂಭಿಸಲು ರುಡ್ ಸೆಟ್ ನಲ್ಲಿ ತರಬೇತಿಯನ್ನು ಪಡೆದರೆ ಉತ್ತಮ ಪ್ರಯೋಜನವಾಗುತ್ತದೆ. ಉದ್ಯಮಿಯಾಗುವವರು ತಮ್ಮ ನಿರ್ಮಾಣ ಮಾಡುವ ಸಂಸ್ಥೆಯಲ್ಲಿ ನಿರಂತರ ಶ್ರಮವಹಿಸಿ ದುಡಿದರೆ ಆ ಉದ್ಯಮ ಯಶಸ್ವಿಯಾಗಿ ನಡೆಯುತ್ತದೆ ಎಂದರು.
ಸಂಘದ ಅಧ್ಯಕ್ಷ ಬಿ ರಮೇಶ್ ಸಾಲ್ಯಾನ್ ಸಂಚಯಗಿರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಅಗ್ರಬೈಲು, ಕೋಶಾಧಿಕಾರಿ ಸೋಮನಾಥ ಸಾಲ್ಯಾನ್ ಉಪಸ್ಥಿತರಿದ್ದರು. ಮಹಿಳಾ ಘಟಕದ ಸದಸ್ಯೆಯರಾದ ನಳಿನಿ ರಮೇಶ್, ವಾರಿಜ ಚೇತನ್, ಮಾಲತಿ ಮಚ್ಚೇಂದ್ರ ಪ್ರಾರ್ಥಿಸಿದರು. ಜೊತೆ ಕಾರ್ಯದರ್ಶಿಗಳಾದ ಮೀನಾಕ್ಷಿ ಪದ್ಮನಾಭ ಸ್ವಾಗತಿಸಿ, ಸತೀಶ್ ಸಂಪಾಜೆ ವಂದಿಸಿದರು. ದಳಪತಿ ಜಯಂತ್ ಕುಲಾಲ್ ಅಗ್ರಬೈಲು ಹಾಗೂ ರಾಜೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

















0 comments:
Post a Comment