ಬಂಟ್ವಾಳ, ನವೆಂಬರ್ 22, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಪುರಸಭಾ ನಿಧಿಯಿಂದ ಕೈಗೊಂಡಿರುವ ಮೂಲಭೂತ ವ್ಯವಸ್ಥೆಯ ಅಳವಡಿಕೆಯಲ್ಲಿ ಆಡಳಿತ ಪಕ್ಷದ ಸದಸ್ಯರೊಳಗೇ ಬ್ಯಾನರ್ ರಾಜಕೀಯ ನಡೆಯುತ್ತಿರುವ ಬಗ್ಗೆ ಪುರವಾಸಿಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಅಧ್ಯಕ್ಷರ ಅನುಮತಿ ಮೇರೆಗೆ ನಿಧಿ ಮಂಜೂರುಗೊಳಿಸಿ ವಾರ್ಡುವಾರು ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದ್ದು, ಇತ್ತೀಚೆಗೆ ಅದು ಉದ್ಘಾಟನೆಗೊಂಡಿತ್ತು. ಆದರೆ ಈ ದೀಪ ಉದ್ಘಾಟನೆಯ ಸಂದರ್ಭ ಪರಿಸರದಲ್ಲಿ ಅಳವಡಿಸಲಾಗಿರುವ ಬ್ಯಾನರಿನಲ್ಲಿ ಸ್ವತಃ ಪುರಸಭಾಧ್ಯಕ್ಷರೇ ಮಾಯವಾಗಿದ್ದಾರೆ. ಪಕ್ಷದ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳ ಫೋಟೋಗಳು ಪುರಸಭಾ ಅಭಿವೃದ್ದಿಯ ಕಾಮಗಾರಿಯ ಅಭಿನಂದನಾ ಬ್ಯಾನರ್‍ಗಳಲ್ಲಿ ರಾರಾಜಿಸುತ್ತಿರುವುದು ಇದೀಗ ಸ್ಥಳೀಯರಲ್ಲಿ ಚರ್ಚೆ ಹುಟ್ಟು ಹಾಕುವಂತೆ ಮಾಡಿದೆ.
ಪುರಸಭಾಧ್ಯಕ್ಷರ ವಿಶೇಷ ಮುತುವರ್ಜಿಯಲ್ಲಿ ಈ ಹೈಮಾಸ್ಟ್ ದೀಪಕ್ಕೆ ಅನುದಾನ ಮೀಸಲಾಗಿದೆ ಎನ್ನಲಾಗುತ್ತಿದ್ದರೂ ಅಭಿನಂದನಾ ಬ್ಯಾನರ್‍ಗಳಲ್ಲಿ ಅಧ್ಯಕ್ಷರ ಭಾವಚಿತ್ರ ಮುದ್ರಿಸದೆ ಸ್ಥಳೀಯ ಸದಸ್ಯರು ಜುಜುಜಿ ರಾಜಕೀಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಆರೋಪಿಸುತ್ತಿದ್ದಾರೆ.
ಆಡಳಿತ ಪಕ್ಷದ ಸದಸ್ಯರೊಳಗೆ ಇರುವ ಶೀತಲ ಸಮರಕ್ಕೆ ಕೊನೆ ಹಾಡಬೇಕಾದ ಪಕ್ಷದ ಹುದ್ದೆಗಳಲ್ಲಿರುವ ನಾಯಕರು ಇದಕ್ಕೆ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವುದು ಕೂಡಾ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇಂತಹ ಸದಸ್ಯರುಗಳಿಗೆ ಮುಂದಿನ ದಿನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೆ ಪಕ್ಷದ ಒಗ್ಗಟ್ಟು ಮೂರಾಬಟ್ಟೆಯಾಗುವುದಲ್ಲದೆ ಒಗ್ಗಟ್ಟು ಪ್ರದರ್ಶನ ಸಾಧ್ಯವೇ ಎಂಬ ಪ್ರಶ್ನೆ ಪುರವಾಸಿಗಳಲ್ಲಿ ಕೇಳಿ ಬರುತ್ತಿದೆ. ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಸಹಿತ ವಿವಿಧ ಕಡೆಗಳಲ್ಲಿ ನಡೆದ ಚುನಾವಣೆಗಳಲ್ಲಿ ಆಡಳಿತ ಪಕ್ಷಗಳ ವೈಫಲ್ಯ ಇದ್ದಾಗ್ಯೂ ಕಾಂಗ್ರೆಸ್ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗದೆ ಇರುವುದಕ್ಕೂ ಕೂಡಾ ಇಂತಹ ಪಕ್ಷದೊಳಗಿನ ವೈಮನಸ್ಸುಗಳು, ಭಿನ್ನಾಭಿಪ್ರಾಯಗಳೇ ಕಾರಣ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಧ್ಯೆಯೇ ಬಂಟ್ವಾಳದಲ್ಲಿ ನಡೆಯುತ್ತಿರುವ ಇಂತಹ ಬೆಳವಣಿಗೆಗಳು ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲೇ ಚಿಂತೆಗೆ ಕಾರಣವಾಗಿರುವುದಂತೂ ಸುಳ್ಳಲ್ಲ.














0 comments:
Post a Comment