ಬಂಟ್ವಾಳ, ನವೆಂಬರ್ 22, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ವರ್ಷಕ್ಕೊಮ್ಮೆಯೂ ಚರಂಡಿ ನಿರ್ವಹಣೆ ಹಾಗೂ ಕಳೆ ಗಿಡಗಳ ವಿಲೇವಾರಿ ನಡೆಯದ ಬಗ್ಗೆ ಪುರವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಸಭಾ ವ್ಯಾಪ್ತಿಯ ಪ್ರಮುಖ ಪೇಟೆಗಳ ಸಹಿತ ವಿವಿಧ ಕಡೆಗಳಲ್ಲಿ ಕನಿಷ್ಠ ಮಳೆಗಾಲ ಆರಂಭವಾಗವುದಕ್ಕಿಂತ ಮುಂಚೆಯಾದರೂ ಚರಂಡಿ ನಿರ್ವಹಣೆ ಹಾಗೂ ಕಳೆಗಿಡಗಳ ವಿಲೇವಾರಿ ಕಾರ್ಯ ನಡೆಯುತ್ತಿರುವುದು ವಾಡಿಕೆಯಾಗಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲಿಯೂ ಚರಂಡಿ ನಿರ್ವಹಣೆ ಮಾಡುವುದಾಗಲೀ, ಕಳೆ ಗಿಡಗಳ ವಿಲೇವಾರಿಯಾಗಲೀ ನಡೆಯುವುದೇ ಇಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುವುದು ಕೇಳಿ ಬರುತ್ತಿದೆ.
ಈ ಹಿಂದೆ ಗುತ್ತಿಗೆ ಆಧಾರದಲ್ಲಿ ನೌಕರರು ಕಾರ್ಯ ನಿರ್ವಹಿಸುತ್ತಿರುವ ಸಂದರ್ಭ ಕನಿಷ್ಠ ವರ್ಷಕ್ಕೆರಡು ಬಾರಿಯಾದರೂ ಈ ಕಾಮಗಾರಿಗಳು ನಡೆದು ಪೇಟೆ-ಪಟ್ಟಣಗಳ ಸಹಿತ ಪುರಸಭಾ ವ್ಯಾಪ್ತಿಯಲ್ಲಿ ನಿರ್ವಹಣೆ ಕಾಪಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಪೌರ ಕಾರ್ಮಿಕರ ಹುದ್ದೆಗಳೂ ಖಾಯಂ ಆಗಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಪುರಸಭೆಯಲ್ಲಿದ್ದರೂ ಆಗಬೇಕಾದ ಕೆಲಸ-ಕಾರ್ಯಗಳು ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಪರಿಣಾಮವಾಗಿ ಪುರಸಭಾ ವ್ಯಾಪ್ತಿಯ ಎಲ್ಲೆಂದರಲ್ಲಿ ಚರಂಡಿಗಳು ವಿಲೇವಾರಿ ಇಲ್ಲದೆ ಸೊರಗುತ್ತಿದ್ದರೆ, ಪೇಟೆಗಳಲ್ಲಿ ರಸ್ತೆಗಳ ಬದಿಗಳಲ್ಲಿ ಕಳೆ ಗಿಡಗಳು ಬೆಳೆದು ರಸ್ತೆಯನ್ನು ಆವರಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಪುರಸಭೆಗೆ ನೂತನವಾಗಿ ಬಂದಿರುವ ಖಾಯಂ ಮುಖ್ಯಾಧಿಕಾರಿಗಳು ಪುರಸಭಾ ವ್ಯಾಪ್ತಿಯ ಸ್ವಚ್ಛತಾ ಕಾಮಗಾರಿಗಳ ಬಗ್ಗೆ ಆದ್ಯತೆ ಮೇರೆಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.


















0 comments:
Post a Comment