ಬಂಟ್ವಾಳ, ನವೆಂಬರ್ 22, 2025 (ಕರಾವಳಿ ಟೈಮ್ಸ್) : ಸಿದ್ದರಾಮ್ಯಯ ನೇತೃತ್ವದ ರಾಜ್ಯ ಸರಕಾರದ ಬಡವರ ಪರ ಮಹತ್ವಾಕಾಂಕ್ರಿ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್ ವ್ಯವಸ್ಥೆಯು ಬಡ ದಿನಕೂಲಿ ಕಾರ್ಮಿಕರ ಪಾಲಿಗೆ ಹೊಟ್ಟೆ ತುಂಬಿಸುವಲ್ಲಿ ಸಫಲವಾಗಿದೆ. ಬಂಟ್ವಾಳದಲ್ಲಿಯೂ ಬಿ ಸಿ ರೋಡಿನ ಹೃದಯ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಪ್ರವೃತ್ತವಾಗಿದ್ದು, ಜನೋಪಯೋಗಿಯಾಗಿ ನಿತ್ಯವೂ ಜನರಿಂದ ಕೂಡಿರುವುದು ಕಂಡು ಬರುತ್ತಿದೆ. ಆದರೆ ಇಲ್ಲಿನ ಇಂದಿರಾ ಕ್ಯಾಂಟೀನಿನ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಅಡುಗೆ ಸಾಮಾನುಗಳನ್ನು ಶೇಖರಿಸಿಡುವ ರೆಫ್ರಿಜರೇಟರ್ ಕಾರ್ಯನಿರ್ವಹಿಸದೆ ಹಲವು ತಿಂಗಳುಗಳೇ ಕಳೆದಿದ್ದು, ಇದು ಯೋಜನೆಯ ಜನೋಪಯೋಗಿತ್ವಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.
ಇಲ್ಲಿನ ಶುದ್ದ ಕುಡಿಯುವ ನೀರಿನ ಘಟಕದ ಬಿಸಿಯಾಗುವ ಹಾಗೂ ತಂಪಾಗುವ ವ್ಯವಸ್ಥೆಯು ಕೈಕೊಟ್ಟಿದೆಯಲ್ಲದೆ ನೀರನ್ನು ಇಲ್ಲಿನ ಸಿಬ್ಬಂದಿಗಳು ನಿತ್ಯ ಕೈಯಲ್ಲೇ ತುಂಬಿಸುವ ಸ್ಥಿತಿ ಉಂಟಾಗಿದೆ. ಇದರಿಂದ ಜನ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯಿಂ ವಂಚಿತರಾಗಿದ್ದಾರೆ. ಅಲ್ಲದೆ ಇಲ್ಲಿನ ಅಡುಗೆ ಕೋಣೆಯಲ್ಲಿನ ಫ್ರಿಡ್ಜ್ ವ್ಯವಸ್ಥೆ ಕೈಕೊಟ್ಟು ಹಲವು ಸಮಯಗಳೇ ಕಳೆದಿದೆ. ಯಾವುದೇ ಆಹಾರ ಪರಾರ್ಥಗಳನ್ನಾಗಲೀ, ಸೊಪ್ಪು ತರಕಾರಿಗಳು ಮೊದಲಾದ ಅಡುಗೆ ಉಪಯುಕ್ತ ಸಾಮಾಗ್ರಿಗಳನ್ನಾಗಲೀ ಕೆಡದಂತೆ ಸುರಕ್ಷಿತವಾಡುವುದು ಸಾಧ್ಯವಾಗುತ್ತಿಲ್ಲ. ಫ್ರಿಡ್ಜ್ ಕೈ ಕೊಟ್ಟಿರುವ ಪರಿಣಾಮ ಇಲ್ಲಿನ ಆಹಾರ ಪದಾರ್ಥಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಪ್ರತಿದಿನಕ್ಕೆ ಬೇಕಾಗುವಷ್ಟೆ ತೂಗಿ ಅಳೆದು ತರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ತಂದ ಸಾಮಾನುಗಳು ಒಂದಷ್ಟು ಹೆಚ್ಚಾದರೂ ಅದನ್ನು ಸಂರಕ್ಷಿಸಿಡಲು ಸಾಧ್ಯವಾಗದೆ ಅದು ಹಾಳಾಗುವ ಸ್ಥಿತಿ ಇದೆ. ಇದು ನಷ್ಟಕ್ಕೂ ಕಾರಣವಾಗುತ್ತಿದೆ.
ಇಂದಿರಾ ಕ್ಯಾಂಟೀನ್ ವ್ಯವಸ್ಥೆನ್ನು ನಿರ್ವಹಿಸುವ ಬಂಟ್ವಾಳ ಪುರಸಭೆ ಇಲ್ಲಿನ ಕೈಕೊಟ್ಟಿರುವ ಯಂತ್ರಗಳನ್ನು ಸಕಾಲದಲ್ಲಿ ಪರಿಶೀಲನೆ ನಡೆಸಿ ಅದನ್ನು ರಿಪೇರಿ ಯಾ ಸುಸ್ಥಿತಿಯಲ್ಲಿಡುವ ಜವಾಬ್ದಾರಿ ನಿರ್ವಹಿಸಬೇಕಿದೆ. ಆದರೆ ಬಿ ಸಿ ರೋಡಿನ ಇಂದಿರಾ ಕ್ಯಾಂಟೀನಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಫ್ರಿಡ್ಜ್ ಹಾಳಾಗಿ ಹಲವು ತಿಂಗಳುಗಳೇ ಕಳೆದರೂ ಇನ್ನೂ ಅವುಗಳನ್ನು ಸುಸ್ಥಿತಿಗೆ ತರುವ ಕೆಲಸ ನಡೆದಿಲ್ಲ. ಬಡ ಜನರ ಉಪಯೋಗಕ್ಕೆ ಸರಕಾರ ಜಾರಿಗೆ ಯೋಜನೆಗಳನ್ನು ಸುಸ್ಥಿತಿಯಲ್ಲಿಡುವಂತೆ ಗಂಭೀರವಾಗಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಸೂಕ್ತ ನಿದೇರ್ಶನ ನೀಡಬೇಕು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.















0 comments:
Post a Comment