ಬಿ.ಸಿ.ರೋಡಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ
ಬಂಟ್ವಾಳ, ನವೆಂಬರ್ 26, 2025 (ಕರಾವಳಿ ಟೈಮ್ಸ್) : ಜಾತಿ, ದರ್ಮ, ಭಾಷೆ, ವರ್ಗ, ಪಂಗಡ ಮೊದಲಾದ ವಿವಿಧತೆ ದೇಶದಲ್ಲಿದ್ದರೂ ಎಲ್ಲರನ್ನು ಒಂದುಗೂಡಿಸುವ ವ್ಯವಸ್ಥೆ ಕಲ್ಪಿಸಿದ್ದು ಡಾ ಬಿ ಆರ್ ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿರುವ ಸಂವಿಧಾನ. ಸಂವಿಧಾನದ ಶಕ್ತಿಯೇ ಈ ದೇಶದ ಉಳಿವಿನ ಶಕ್ತಿಯಾಗಿದೆ ಎಂದು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಹೇಳಿದರು.
ರಾಜ್ಯ ಸಮಾಜ ಕಲ್ಯಾಣ ಇಲಾಖೆ ಆದೇಶದಂತೆ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಬಂಟ್ವಾಳ ತಾಲೂಕಾಡಳಿತ, ತಾಲೂಕು ಪಂಚಾಯತ್, ಪುರಸಭೆ ಸಹಿತ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬಿ ಸಿ ರೋಡಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಸಂವಿಧಾನ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿಯೇ ಈ ದೇಶದ ಅಭಿಮಾನವಾಗಿದ್ದು, ಶೇ 70 ಯುವ ಸಮೂಹವನ್ನು ಹೊಂದಿರುವ ನಮ್ಮ ದೇಶದ ಯುವ ಪೀಳಿಗೆಯು ಸಂವಿಧಾನ ಬದ್ದವಾದ ದಾರಿಯನ್ನು ಕಂಡುಕೊಂಡಾಗ ದೇಶವೂ ಸರಿಯಾದ ದಿಕ್ಕಿನಲ್ಲಿ ಸಾಗುವ ಮೂಲಕ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣವಾಗಲು ಸಾಧ್ಯವಿದೆ ಎಂದರು.
ಬಂಟ್ವಾಳ ತಾಲೂಕು ದಂಡಾಧಿಕಾರಿ ಮಂಜುನಾಥ್ ಅವರು ಸಂವಿಧಾನ ಪೀಠಿಕೆ ವಾಚಿಸಿ ಪ್ರತಿಜ್ಞಾ ವಿದೀ ಬೋಧಿಸಿದರು. ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ವಿಶೇಷ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸುರೇಖಾ ಯಾಳವಾರ ಅವರು ಸಂವಿಧಾನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ತಾ ಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಕೆ ಬಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿರೂಪದ ಛದ್ಮವೇಷಧಾರಿ ಬಿ ಸಿ ರೋಡು ಸಮಾಜ ಕಲ್ಯಾಣ ಇಲಾಖಾ ಶಾಲಾ ವಿದ್ಯಾರ್ಥಿ ಮುತ್ತಪ್ಪ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ಬಂಟ್ವಾಳ ತಾಲೂಕು ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಸ್ವಾಗತಿಸಿ, ನಿಲಯ ಮೇಲ್ವಿಚಾರಕ ಪ್ರಸಾದ್ ವಂದಿಸಿದರು. ಪಾಣೆಮಂಗಳೂರು ಬಾಲಕಿಯರ ವಿದ್ಯಾರ್ಥಿನಿಲಯ ಮೇಲ್ವಿಚಾರಕಿ ಭವ್ಯ ಪಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಬಿ ಸಿ ರೋಡು ಬ್ರಹ್ಮಶೀ ನಾರಾಯಣ ಗುರು ವೃತ್ತದಿಂದ ಡಾ ಬಿ ಆರ್ ಅಂಬೇಡ್ಕರ್ ಭವನದವರೆಗೆ ಫ್ರೌಢಶಾಲೆ/ ಕಾಲೇಜು ಎನ್ ಎಸ್ ಎಸ್, ಸ್ಪೋರ್ಸ್ ವಿದ್ಯಾರ್ಥಿಗಳಿಂದ ರಾಷ್ಟ್ರ ಧ್ವಜಗಳ ಪ್ರದರ್ಶನದೊಂದಿಗೆ ಸಂವಿಧಾನ ಪುಸ್ತಕಗಳನ್ನು ಹಾಗೂ ಸಂವಿಧಾನದ ಕುರಿತು ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರಮುಖ ನುಡಿ ಮುತ್ತುಗಳನ್ನು ಫ್ಲೇ ಕಾರ್ಡ್ ಪ್ರದರ್ಶಿಸುವ ಮೂಲಕ ಜಾಥಾ ನಡೆಯಿತು.









































0 comments:
Post a Comment