ಸಂವಿಧಾನ ಅರ್ಥೈಸಿಕೊಂಡು ದೇಶಕ್ಕೆ, ಸಮಾಜಕ್ಕೆ ಪೂರಕ ಕೆಲಸ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಸ್ಪೀಕರ್ ಡಾ ಯು.ಟಿ. ಖಾದರ್ - Karavali Times ಸಂವಿಧಾನ ಅರ್ಥೈಸಿಕೊಂಡು ದೇಶಕ್ಕೆ, ಸಮಾಜಕ್ಕೆ ಪೂರಕ ಕೆಲಸ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಸ್ಪೀಕರ್ ಡಾ ಯು.ಟಿ. ಖಾದರ್ - Karavali Times

728x90

26 November 2025

ಸಂವಿಧಾನ ಅರ್ಥೈಸಿಕೊಂಡು ದೇಶಕ್ಕೆ, ಸಮಾಜಕ್ಕೆ ಪೂರಕ ಕೆಲಸ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಸ್ಪೀಕರ್ ಡಾ ಯು.ಟಿ. ಖಾದರ್

ಮಂಗಳೂರು, ನವೆಂಬರ್ 26, 2025 (ಕರಾವಳಿ ಟೈಮ್ಸ್) : ಇತಿಹಾಸವನ್ನು ತಿಳಿದುಕೊಂಡವರು ಮಾತ್ರ ಇತಿಹಾಸವನ್ನು ಸೃಷ್ಟಿಸಬಲ್ಲರು ಎಂಬ ಅಂಬೇಡ್ಕರ್ ಅವರ ಮಾತಿನಂತೆ ಭವಿಷ್ಯದ ಮುಂದಿನ ದಿನಗಳಲ್ಲಿ ಇತಿಹಾಸವನ್ನು ಸೃಷ್ಟಿಸುವ ವ್ಯಕ್ತಿತ್ವವನ್ನು ಇಂದಿನ ಯುವಜನತೆ ರೂಪಿಸಿಕೊಳ್ಳಬೇಕು. ಸಂವಿಧಾನವನ್ನು ಅರ್ಥೈಸಿಕೊಂಡು ನಮ್ಮ ದೇಶಕ್ಕೆ ಮತ್ತು ಸಮಾಜಕ್ಕೆ ಪೂರಕವಾಗುವಂತ ಕೆಲಸವನ್ನು ಮಾಡುವ ಜವಾಬ್ದಾರಿ ನಮ್ಮದು ಎಂದು ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್ ಫರೀದ್ ಹೇಳಿದರು.

ನಗರದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ  ನ 26 ರಂದು ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ ಬಿ ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಪುಸ್ತಕಗಳನ್ನು ಹಾಗೂ ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕು. ಸಂವಿಧಾನದಲ್ಲಿ ಬರೆದ ಪ್ರತಿಯೊಂದು ಚಿಂತನೆಗಳು ಅರ್ಥಪೂರ್ಣವಾಗಿದ್ದು, ಸಂವಿಧಾನವನ್ನು ಓದಿ ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸಂವಿಧಾನಕ್ಕನುಗುಣವಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ನಮ್ಮ ದೇಶ ಬಲಿಷ್ಠವಾಗುತ್ತದೆ ಎಂದರು.

ದೇಶದ ಅತ್ಯಂತ ಕಟ್ಟ ಕಡೆಯ ವ್ಯಕ್ತಿ ಕೂಡ ಇಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಿರ್ಭಯದಿಂದ ಓಡಾಡಲು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಕಾರಣ. ಭಾರತ ದೇಶದ ಪ್ರಜೆಗಳಾದ ನಾವು ಸಂವಿಧಾನಕ್ಕೆ ಬದ್ಧರಾಗಿರಬೇಕು.  ಸಂವಿಧಾನದ  ವಿರುದ್ಧವಾಗಿ  ನಡೆದವರಿಗೆ  ಮನವರಿಕೆ ಮಾಡಿ ಅವರನ್ನು ಸತ್ಪ್ರಜೆಗಳನ್ನಾಗಿಸುವುದು ಅಗತ್ಯವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನು ಸಂವಿಧಾನವನ್ನು ಓದಿ ಅದರ ಬಗ್ಗೆ ಅರಿವು ಹೊಂದಬೇಕು  ಎಂದು ಸ್ಪೀಕರ್ ಹೇಳಿದರು.

ಉಪನ್ಯಾಸ ನೀಡಿದ ಗೋಕರ್ಣನಾಥ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಘುರಾಜ್ ಕದ್ರಿ ಅವರು, ಡಾ ಬಿ ಆರ್ ಅಂಬೇಡ್ಕರ್ ದೇಶಕ್ಕೆ ಜನರಿಗೆ ಪ್ರತಿಯೊಂದು ವರ್ಗಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. ಸಂವಿಧಾನವು ಸಮಾಜದ ಭಯವನ್ನು ನಿವಾರಿಸಲು ಸೃಷ್ಟಿಯಾದ ಒಂದು ವ್ಯವಸ್ಥೆ ಎಂದರು. 

ಯಾವುದೇ ಬಣ್ಣ, ಜಾತಿ, ಮತ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರು ಸಮಾನ ರೀತಿಯಲ್ಲಿ ಇರುವ ಅವಕಾಶ ಕಲ್ಪಿಸಿರುವುದು ಸಂವಿಧಾನ. ಸಂವಿಧಾನ ಇಲ್ಲದ ಸಂದರ್ಭದಲ್ಲಿ ದೇಶ ಹೇಗಿತ್ತು ಮತ್ತು ಸಂವಿಧಾನ ಬಂದ ನಂತರ ದೇಶ ಹೇಗೆ ಬದಲಾಯಿತು ಎಂಬ ವಿಚಾರವನ್ನು ಯುವ ಜನತೆ ಅರಿತುಕೊಳ್ಳಬೇಕು ಎಂದವರು ಹೇಳಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ರಾಜು ಕೆ ಸಂವಿಧಾನ ಪೀಠಿಕೆ ವಾಚಿಸಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಭಾಗವಹಿಸಿದ್ದರು. 

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ ಬಿ ಎಸ್ ಹೇಮಲತಾ  ಸ್ವಾಗತಿಸಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಅಡಿಗ ವಂದಿಸಿದರು. ಪ್ರದೀಪ್ ಡಿ ಎಂ ಹಾವಂಜೆ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಸಂವಿಧಾನ ಅರ್ಥೈಸಿಕೊಂಡು ದೇಶಕ್ಕೆ, ಸಮಾಜಕ್ಕೆ ಪೂರಕ ಕೆಲಸ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಸ್ಪೀಕರ್ ಡಾ ಯು.ಟಿ. ಖಾದರ್ Rating: 5 Reviewed By: karavali Times
Scroll to Top