ಬಂಟ್ವಾಳ, ನವೆಂಬರ್ 26, 2025 (ಕರಾವಳಿ ಟೈಮ್ಸ್) : ರಸ್ತೆ ಬದಿಯ ತಿಂಡಿ-ತಿನಿಸು ಅಂಗಡಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ ಪರಿಣಾಮ ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಳ ಗ್ರಾಮದ ಶುಂಠಿಹಿತ್ಲು ನಿವಾಸಿ ಶೇಖಬ್ಬ (53) ಎಂಬವರ ಅರಳ ಗ್ರಾಮದ ಶುಂಠಿಹಿತ್ಲು ನವಗ್ರಾಮ ಹೋಗುವ ರಸ್ತೆ ಬದಿಯಲ್ಲಿದ್ದ ಅಂಗಡಿಗೆ ಆರೋಪಿ ಸ್ಥಳೀಯ ನಿವಾಸಿ ರಾಜೇಶ್ ಎಂಬಾತ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.
ಶೇಖಬ್ಬ ಅವರು ಪ್ರತಿ ದಿನ ಸಂಜೆ 3 ಗಂಟೆಗೆ ಅಂಗಡಿ ತೆರೆದು ರಾತ್ರಿ 10 ಗಂಟೆಯವರೆಗೆ ಅಂಗಡಿ ವ್ಯಾಪಾರ ಮಾಡಿಕೊಂಡು ಹೋಗುವುದಾಗಿದೆ. ನವೆಂಬರ್ 25 ರಂದು ರಾತ್ರಿ 2.45 ರ ವೇಳೆಗೆ ಸ್ಥಳೀಯ ನಿವಾಸಿ ಅಟೋ ಚಾಲಕ ಆಸೀಫ್ ಎಂಬವರು ಅಟೋ ರಿಕ್ಷಾದಲ್ಲಿ ಬಾಡಿಗೆಗೆ ಹೋಗಿ ವಾಪಾಸು ಬರುತ್ತಿದ್ದಾಗ ಶೇಖಬ್ಬ ಅವರ ಅಂಗಡಿಗೆ ರಾಜೇಶ್ ಎಂಬಾತ ಬೆಂಕಿ ಹಚ್ಚುತ್ತಿದ್ದು, ಈ ಸಂದರ್ಭ ಆಸೀಫ್ ರಿಕ್ಷಾ ನಿಲ್ಲಿಸಿ ಆತನಲ್ಲಿ ಏನು ಮಾಡುತ್ತಿದ್ದಿ ಎಂದು ಪ್ರಶ್ನಿಸಿದಾಗ ರಾಜೇಶನು ಅಲ್ಲಿಂದ ಓಡಿ ಹೋಗಿರುತ್ತಾನೆ. ಬಳಿಕ ಆಸೀಪ್ ಅಂಗಡಿ ಮಾಲಕ ಶೇಖಬ್ಬ ಅವರಿಗೆ ವಿಚಾರ ತಿಳಿಸಿದ್ದಾರೆ. ತಕ್ಷಣ ಅಂಗಡಿ ಮಾಲಕ ತನ್ನ ಹೆಂಡತಿ, ಮಗಳು, ಸಹೋದರಿಯರಾದ ಆಯಿಷಮ್ಮ, ಬಿಪಾತುಮ್ಮ ಹಾಗೂ ಆಶೀಪ್ ಜೊತೆ ಅಂಗಡಿ ಬಳಿಗೆ ಹೋದಾಗ ಅಂಗಡಿಯಲ್ಲಿರುವ ಸಾಮಾಗ್ರಿ ಹಾಗೂ ಅಂಗಡಿಗೆ ಅಳವಡಿಸಿದ್ದ ಟರ್ಪಾಲ್, ತಾಳೆಗರಿಯ ಚಪ್ಪರ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ.
ತಕ್ಷಣ ಅವರು ನೆರೆಕರೆಯವರನ್ನು ಕರೆದು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಬಳಿಕ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದಂತೆ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಸಂಪೂರ್ಣ ಬೆಂಕಿ ನಂದಿಸಿದ್ದಾರೆ. ಬೆಂಕಿಯಿಂದ ಅಂಗಡಿಯಲ್ಲಿಟ್ಟಿದ್ದ ವಸ್ತುಗಳಾದ ಐಸ್ ಬಾಕ್ಸ್ ಫ್ರಿಡ್ಜ್, ಜ್ಯೂಸ್ ಪ್ಯಾಕೆಟ್, ಪಾಸ್ಟ್ ಪುಡ್ ಮಾಡಲು ಉಪಯೋಗಿಸುವ 10 ಕೆಜಿ ಮೈದಾ, 7 ಟ್ರೇ ಮೊಟ್ಟೆ, 5 ಕೆಜಿ ಅಕ್ಕಿ, 3 ಲೀಟರ್ ಸನ್ ಪ್ಲವರ್ ಆಯಿಲ್, ಚಾಕಲೆಟ್ ಡಬ್ಬಗಳು, ತಿಂಡಿ ತಿನಿಸುಗಳ ಪ್ಯಾಕೆಟುಗಳು, ಪ್ಲಾಸ್ಟಿಕ್ ಪಾತ್ರೆಗಳು, ಪ್ಲಾಸ್ಟಿಕ್ ಚಯರ್ ಹಾಗೂ ಇನ್ನಿತರ ಎಲ್ಲಾ ಸೊತ್ತುಗಳು ಸುಟ್ಟು ಹೋಗಿದೆ. ಘಟನೆಯಿಂದ ಸುಮಾರು 20 ಸಾವಿರ ರೂಪಾಯಿ ನಷ್ಟ ಉಂಟಾಗಿದೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment