ಬಂಟ್ವಾಳ, ನವೆಂಬರ್ 06, 2025 (ಕರಾವಳಿ ಟೈಮ್ಸ್) : ತಾಲೂಕಿನ ನಗ್ರಿಯಿಂದ ಮಂಚಿವರೆಗೆ ಕುಡಿಯುವ ನೀರಿನ ಕೊಳವೆಗಳನ್ನು ಅಳವಡಿಸಲು ಉದ್ದಕ್ಕೂ ರಸ್ತೆ ಅಗೆದು ಹಾಕಲಾಗಿದ್ದು ವಾಹನ ಸವಾರರ ಹಾಗೂ ಸಾರ್ವಜನಿಕರ ಪಾಲಿಗೆ ಅಪಾಯವನ್ನು ಆಹ್ವಾನಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಈ ಕಾಮಗಾರಿ ಕೈಗೊಂಡಿದೆ ಎನ್ನಲಾಗುತ್ತಿದೆ. ಬಂಟ್ವಾಳ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ಸುರತ್ಕಲ್ -ಕಬಕ ರಾಜ್ಯ ಹೆದ್ದಾರಿ (ಮಾರ್ನಬೈಲ್-ಸಾಲೆತ್ತೂರು) ರಸ್ತೆಯ ನಗ್ರಿಯಿಂದ ಮಂಚಿವರೆಗೆ ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ಯಾವುದೇ ಪರವಾನಿಗೆಯಾಗಲೀ, ಪೂರ್ವಾನುಮತಿಯಾಗಲೀ ಇಲ್ಲದೆ ಅನಧಿಕೃತವಾಗಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಇಲ್ಲದೆ ರಸ್ತೆಯನ್ನು ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಅಗೆದು ಹಾಕಿದ್ದು, ರಸ್ತೆಯ ಡಾಂಬರು ಹಾಗೂ ರಸ್ತೆ ಬದಿ ತೀವ್ರ ಹಾನಿಗೊಂಡಿದೆ.
ಈ ರೀತಿ ಅವೈಜ್ಞಾನಿಕವಾಗಿ ರಸ್ತೆ ಅಗೆದು ಹಾಕಿದ ಪರಿಣಾಮ ಯಾವುದೇ ಸುರಕ್ಷಾ ಕ್ರಮಗಳನ್ನು ಅಳವಡಿಸದೆ ಇರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಅಪಾಯ ಆಹ್ವಾನಿಸುವಂತಿದೆ. ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿ ಕ್ರಮದಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಅಗೆತದಿಂದ ಅಪಾಯಗಳೇನಾದರೂ ಸಂಭವಿಸಿದರೆ ಇದಕ್ಕೆ ಹೊಣೆ ಯಾರು ಎಂಬ ಜಿಜ್ಞಾಸೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತಿದೆ.
ರಸ್ತೆ ಅಗೆದು ಹಾಳು ಮಾಡಿಸ ಸ್ಥಳಕ್ಕೆ ಬಂಟ್ವಾಳ ಲೋಕೋಪಯೋಗಿ ಇಲಾಖಾಧಿಕಾರಿಗಳು ಭೇಟಿ ನೀಡಿದ್ದು, ತಕ್ಷಣ ಕೈಗೆತ್ತಿಕೊಂಡಿರುವ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಿ ರಸ್ತೆ ರಸ್ತೆಯನ್ನು ಸುಸ್ಥಿತಿಗೆ ತಂದು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಹಾಗೂ ಸ್ಥಳದಲ್ಲಿದ್ದ ಗುತ್ತಿಗೆದಾರರು-ಕಾರ್ಮಿಕರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.



















0 comments:
Post a Comment