ಬಂಟ್ವಾಳ, ನವೆಂಬರ್ 12, 2025 (ಕರಾವಳಿ ಟೈಮ್ಸ್) : ಪಂಚಾಯತ್ ಸಾಮಾನ್ಯ ಸಭೆ ನಿಗದಿಯಾಗಿರುವುದು ಗೊತ್ತಿದ್ದೂ ರಜೆ ಹಾಕಿ ತೆರಳಿದ್ದಲ್ಲದೆ ಇತ್ತೀಚೆಗೆ ಸರಕಾರ ನಿಯೋಜಿಸಿದ ಶೈಕ್ಷಣಿಕ, ಸಾಮಾಜಿಕ ಗಣತಿ ಕಾರ್ಯಕ್ಕೂ ಹಾಜರಾಗದೆ ನಿರ್ಲಕ್ಷ್ಯ ವಹಿಸಿದ ಸಜಿಪಮುನ್ನೂರು ಗ್ರಾಮ ಪಂಚಾಯತ್ ಪಿಡಿಒ ಲಕ್ಷ್ಮಣ್ ಎಚ್ ಕೆ ಅವರನ್ನು ಅಮಾನತುಗೊಳಿಸಿ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶಿಸಿದ್ದಾರೆ.
ಪಿಡಿಒ ಲಕ್ಷ್ಮಣ್ ಅವರು ಕಳೆದ ಜುಲೈ ತಿಂಗಳಿನಿಂದ ಪಂಚಾಯತ್ ಸಾಮಾನ್ಯ ಸಭೆಗಳಿಗೆ ಅನಾರೋಗ್ಯದ ಕಾರಣ ನೀಡಿ ರಜೆ ಹಾಕಿ ತಪ್ಪಿಸಿಕೊಂಡಿದ್ದು, ಈ ಮಧ್ಯೆ 2 ಸಾಮಾನ್ಯ ಸಭೆಗಳನ್ನು ಮಂಚಿ ಪಂಚಾಯತ್ ಪಿಡಿಒ ಶ್ರೀಮತಿ ನಿರ್ಲಲ ಹಾಗೂ ಅಮ್ಟಾಡಿ ಪಂಚಾಯತ್ ಪಿಡಿಒ ಗೋಕುಲ್ ದಾಸ್ ಭಕ್ತ ಅವರ ಹೆಚ್ಚುವರಿ ಪ್ರಭಾರ ಕರ್ತವ್ಯದಲ್ಲಿ ನಡೆಸಲಾಗಿದೆ. ಅಲ್ಲದೆ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಗೆ ಇವರನ್ನು ಗಣತಿದಾರನನ್ನಾಗಿ ನಿಯೋಜಿಸಿದ್ದರೂ ಗಣತಿ ಕಾರ್ಯಕ್ಕೆ ಹಾಜರಾಗಿಲ್ಲ, ಗಣತಿಯನ್ನು ನಡೆಸಿರುವುದಿಲ್ಲ.
ಈ ಬಗ್ಗೆ ಪಿಡಿಒ ಅವರಿಗೆ ಕಾರಣ ಕೇಳಿ ನೋಟೀಸು ನೀಡಲಾಗಿದ್ದು, ಸದ್ರಿ ನೋಟೀಸಿಗೆ ಪಿಡಿಒ ಲಕ್ಷಣ್ ಅವರು ನೀಡಿರುವ ಸಮಜಾಯಿಷಿ ಒಪ್ಪತಕ್ಕದ್ದಲ್ಲ ಎಂದು ಸಮರ್ಪಕವಾಗಿಲ್ಲ ಎಂದು ಅವರ ಮೇಲಿನ ಆರೋಪಗಳ ಕುರಿತು ಇಲಾಖಾ ವಿಚಾರಣೆ ಕಾಯ್ದಿರಿಸಿ ಅವರನ್ನು ಅಮಾನತುಗೊಳಿಸಿ ಜಿ ಪಂ ಸಿಇಒ ಅವರು ಆದೇಶಿಸಿದ್ದಾರೆ. ಸದ್ಯ ಸಜಿಪಮುನ್ನೂರು ಗ್ರಾಮ ಪಂಚಾಯತಿಗೆ ಪ್ರಭಾರ ನೆಲೆಯಲ್ಲಿ ಅಮ್ಟಾಡಿ ಗ್ರಾ ಪಂ ಪಿಡಿಒ ಗೋಕುಲ್ ದಾಸ್ ಭಕ್ತ ಅವರನ್ನು ನಿಯೋಜಿಸಲಾಗಿದ್ದು ಅವರ ಉಪಸ್ಥಿತಿಯಲ್ಲಿ ಈ ತಿಂಗಳ ಗ್ರಾಮಸಭೆ ನಡೆದಿದೆ ಎಂದು ತಿಳಿದು ಬಂದಿದೆ.















0 comments:
Post a Comment