ಹೆರಿಗೆಯಾದ ಮಗುವಿಗೆ ಕಟ್ಟುವ ಬಟ್ಟೆ ಇದೆಯಾ ಎಂದು ಹಿಂದಿಯಲ್ಲಿ ಕೇಳಿ ಸೋಮಯಾಜಿಗೆ ಇರಿದ ಜ್ಯೋತಿ
ಬಂಟ್ವಾಳ, ನವೆಂಬರ್ 20, 2025 (ಕರಾವಳಿ ಟೈಮ್ಸ್) : ಬುರ್ಖಾ ಧರಿಸಿ ಬಂದ ಪತ್ನಿಯೇ ಚೂರಿಯಿಂದ ಹಲ್ಲೆಗೈದ ಪತಿಯನ್ನು ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಜ್ಯೋತಿ ಕೆ ಟಿ ಎಂಬಾಕೆಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಗಂಭೀರ ಗಾಯಗೊಂಡಿರುವ ಪತಿ ಕೃಷ್ಣ ಕುಮಾರ್ ಸೋಮಯಾಜಿ ಅವರು ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೌಟುಂಬಿಕ ಮನಸ್ತಾಪದಿಂದ ಪತ್ನಿ ಈ ಕೃತ್ಯ ಎಸಗಿದ್ದು, ಈ ಹಿಂದೆ ಕೂಡಾ ಪತ್ನಿ ಅಂಗಡಿಗೆ ಬಂದು ಜೀವಬೆದರಿಕೆ ಹಾಕಿ ಹೋಗಿದ್ದರು ಎನ್ನಲಾಗಿದೆ. ಕೃಷ್ಣ ಕುಮಾರ್ ಸೋಮಯಾಜಿ ಹಾಗೂ ಅವರ ಪತ್ನಿ ಜ್ಯೋತಿ ಕೆ ಟಿ ಅವರ ಮಧ್ಯೆ ಕೌಟುಂಬಿಕ ವಿಚಾರದಲ್ಲಿ ಮನಸ್ತಾಪವಿದ್ದು, ಇದೇ ದ್ವೇಷದಿಂದ ಕೃಷ್ಣ ಕುಮಾರ್ ಸೋಮಯಾಜಿ ಅವರನ್ನು ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಹಲ್ಲೆ ನಡೆಸಿರುತ್ತಾರೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಕೃಷ್ಣ ಕುಮಾರ್ ಸೋಮಯಾಜಿ ಅವರ ಅಂಗಡಿಯಲ್ಲಿ 2010 ರಿಂದ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡಿಕೊಂಡಿರುವ ಘಟನೆಯ ಪ್ರತ್ಯಕ್ಷದರ್ಶಿಯೂ ಆಗಿರುವ, ಪೆರಾಜೆ ಗ್ರಾಮದ ಮಾಣಿ ಸಮೀಪದ ಕಾನ-ಗುರುಪ್ರಿಯಾ ಮನೆ ನಿವಾಸಿ ಅಭಿಷೇಕ್ ಕೆ ಪಿ ಅವರ ಪತ್ನಿ ಶ್ರೀಮತಿ ನಮಿತಾ (33) ಅವರು ಪೊಲೀಸರಿಗೆ ದೂರು ನೀಡಿದ್ದು, ಬಿ ಸಿ ರೋಡಿನಲ್ಲಿರುವ ಸೋಮಯಾಜಿ ಟೆಕ್ಸ್ ಟೈಲ್ಸ್ ಅಂಗಡಿ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಅವರಿಗೆ ಜ್ಯೋತಿ ಕೆ ಟಿ ಎಂಬವರೊಂದಿಗೆ 2010 ರಲ್ಲಿ 2ನೇ ವಿವಾಹವಾಗಿದ್ದು, ಜ್ಯೋತಿ ಕೆ ಟಿ ಅವರಿಗೆ ಅವರ ಮೊದಲನೇ ಗಂಡನಿಂದ ಒಬ್ಬ ಗಂಡು ಮಗನಿದ್ದನು. ಆತ 2024ರಲ್ಲಿ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಅಸ್ವಾಭಾವಿಕವಾಗಿ ಮೃತಪಟ್ಟಿದ್ದು, ಮಗನ ಸಾವಿನ ನಂತರ ಜ್ಯೋತಿ ಕೆ ಟಿ ಮತ್ತು ಕೃಷ್ಣ ಕುಮಾರ್ ಸೋಮಯಾಜಿ ಅವರ ಸಾಂಸಾರಿಕ ಜೀವನದಲ್ಲಿ ಸಮಸ್ಯೆಯಾಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿಕೊಂಡಿದ್ದರು.
ಹೀಗಿರುತ್ತಾ ನ 19 ರಂದು ರಾತ್ರಿ ಸುಮಾರು 7 ಗಂಟೆ ವೇಳೆಗೆ ಮಾಲಕರು ಅಂಗಡಿಯ ಒಳಗೆ ಕ್ಯಾಷ್ ಕೌಂಟರ್ ನಲ್ಲಿದ್ದು, ಈ ಸಂದರ್ಭ ನೋಡಿ ಪರಿಚಯವಿರುವ ಅಟೋ ರಿಕ್ಷಾ ಚಾಲಕನೋರ್ವ ಅಂಗಡಿಯ ಮುಂದೆ ರಿಕ್ಷಾ ತಂದು ನಿಲ್ಲಿಸಿದ್ದು, ರಿಕ್ಷಾದಿಂದ ಒಬ್ಬ ಬುರ್ಖಾಧಾರಿ ಹೆಂಗಸೊಬ್ಬರು ಇಳಿದು, ಅಟೋ ರಿಕ್ಷಾ ಚಾಲಕರಲ್ಲಿ ಮಾತಾಡಿಕೊಂಡಿದ್ದು, ನಂತರ ಬುರ್ಖಾಧಾರಿ ಹೆಂಗಸು ಗ್ರಾಹಕರ ಸೋಗಿನಲ್ಲಿ ಅಂಗಡಿಯ ಒಳಗೆ ಬಂದು ಹೆರಿಗೆಯಾದ ಮಗುವಿಗೆ ಕಟ್ಟುವ ಬಟ್ಟೆ ಇದೆಯಾ ಎಂದು ಹಿಂದಿಯಲ್ಲಿ ಕೇಳಿದ್ದಾಳೆ. ಅದು ಮಹಡಿಯಲ್ಲಿರುವ ಕಾರಣ ಮಹಡಿಗೆ ಬನ್ನಿ ಎಂದು ಸೇಲ್ಸ್ ಗರ್ಲ್ ಕರೆದರೂ ಹೆಂಗಸು “ನಾನು ಮೇಲೆ ಬರುವುದಿಲ್ಲ” ಎಂದು ಹಿಂದಿಯಲ್ಲಿ ಹೇಳಿ ಕೆಳಗೆಯೇ ನಿಂತುಕೊಂಡಿದ್ದರು. ಸೇಲ್ಸ್ ಗರ್ಲ್ ನಮಿತಾ ಅವರು ಅಂಗಡಿಯ ಮಹಡಿಗೆ ಹೋಗಿ ಮಗುವಿಗೆ ಕಟ್ಟುವ ಬಟ್ಟೆ ಕಟ್ ಮಾಡುತ್ತಿದ್ದಾಗ ಕೆಳಗಡೆಯಿಂದ ಜೋರು ಬೊಬ್ಬೆ ಕೇಳಿದ್ದು, ಬಟ್ಟೆ ಕಟ್ ಮಾಡುವುದನ್ನು ಅರ್ಧದಲ್ಲಿಯೇ ಬಿಟ್ಟು, ಓಡಿಕೊಂಡು ಕೆಳಗೆ ಬಂದು ನೋಡಿದಾಗ, ಅಂಗಡಿ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಅವರ ತಲೆ, ಕೈಯಿಂದ ರಕ್ತ ಬರುತ್ತಿದ್ದು, ಅವರು ಹೊರಗಡೆ “ಬದುಕಿಸಿ” ಎಂದು ಕಿರುಚುತ್ತಾ ಹೊರಗಡೆ ಓಡಿದರು. ಆಗ ಬುರ್ಖಾಧಾರಿ ಹೆಂಗಸು ಕೂಡಾ ಉದ್ದನೆಯ ಕತ್ತಿಯನ್ನು ಹಿಡಿದುಕೊಂಡು “ನಿಲ್ಲು ಎಲ್ಲಿಗೆ ಓಡುತ್ತೀಯಾ? ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಹೇಳಿದ ಸ್ವರವನ್ನು ಕೇಳಿ ಅದು ಮಾಲಕರ ಪತ್ನಿ ಜ್ಯೋತಿ ಕೆ ಟಿ ಯವರ ಸ್ವರ ಎಂದು ಸೇಲ್ಸ್ ಗರ್ಲ್ ನಮಿತಾ ಅವರು ಗುರುತಿಸಿದ್ದು, ಹೆಂಗಸಿನ ಕೈಯಿಂದ ತಪ್ಪಿಸಿಕೊಂಡು ನಮಿತಾ ಅವರ ಬಳಿ ಬಂದ ಕೃಷ್ಣಕುಮಾರ್ ಅವರನ್ನು ಬುರ್ಖಾಧಾರಿ ಹೆಂಗಸಿನಿಂದ ರಕ್ಷಿಸುವ ಸಲುವಾಗಿ ನಮಿತಾ ಅವರು ಗಟ್ಟಿಯಾಗಿ ಹಿಡಿದಿದ್ದು, ಮತ್ತೆ ಆ ಹೆಂಗಸು ಮಾಲಕರ ಹತ್ತಿರ ಬಂದಿದನ್ನು ಕಂಡು ಜೀವ ಭಯದಿಂದ ಅಂಗಡಿಯ ಹಿಂಬದಿ ಓಡಿಹೋದಾಗ ಹೆಂಗಸು ಕೂಡಾ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಮಾಲಕರನ್ನು ಹಿಂಬಾಳಿಸಿಕೊಂಡು ಅಂಗಡಿ ಸಂಕೀರ್ಣದ ಮೇಲೆ ಹೋಗಿದ್ದು, ಆಗ ಮಾಲಕರು ತಪ್ಪಿಸಿಕೊಂಡು ಅಂಗಡಿಯ ಹಿಂಬದಿಯಿಂದ ಹೊರಗಡೆ ಬಂದು “ಎನನ್ ಬದ್ ಕಲಾ” ಎಂದು ಹೇಳಿದಾಗ ತೀವ್ರವಾಗಿ ರಕ್ತ ಸುರಿಯುತ್ತಿದ್ದುದನ್ನು ಕಂಡ ನಮಿತಾ ಅವರು ಅಟೋ ರಿಕ್ಷಾವೊಂದರಲ್ಲಿ ಬಿ ಸಿ ರೋಡು ಸೋಮಯಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಬಗ್ಗೆ ದಾಖಲು ಮಾಡಿಕೊಂಡಿದ್ದು, ಕೃಷ್ಣ ಕುಮಾರ್ ಸೋಮಯಾಜಿಯವರ ತಲೆಯ ಹಿಂಭಾಗಕ್ಕೆ, ಬಲಕೈ ಕೋಲು ಕೈಗೆ, ಎದೆಗೆ ಕಡಿದ ತೀವ್ರ ಗಾಯವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡುವಂತೆ ಸಲಹೆ ನೀಡಿದ ಪ್ರಕಾರ ಅವರನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/2025, ಕಲಂ 118(1), 118(2), 351(3), 109(1), 49 ಜೊತೆಗೆ 3(5) ಬಿ ಎನ್ ಎಸ್-2023 , ಕಲಂ: 2(1)(ಸಿ), 27 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ-1959ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.














0 comments:
Post a Comment