ಬಂಟ್ವಾಳ, ಡಿಸೆಂಬರ್ 10, 2025 (ಕರಾವಳಿ ಟೈಮ್ಸ್) : ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ನವ ವಿವಾಹಿತ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಮೃತ ಯುವಕನನ್ನು ಬಂಟ್ವಾಳ ತಾಲೂಕಿನ ಪೆರಿಯಪಾದೆ ಜಮಾಅತಿಗೊಳಪಟ್ಟ ಕುಂಟಾಲಪಳಿಕೆ-ಕೆಳಗಿನ ಮನೆ ನಿವಾಸಿ ದಿವಂಗತ ಅಹಮದ್ ಎಂಬವರ ಪುತ್ರ ಮುಹಮ್ಮದ್ ಹಾರಿಸ್ (27) ಎಂದು ಹೆಸರಿಸಲಾಗಿದೆ. ಬೆಂಗಳೂರಿನ ಎಸಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಹಾರಿಸ್ ಡಿ 9 ರಂದು ಕೆಲಸದ ನಿಮಿತ್ತ ತನ್ನ ಸಹೋದ್ಯೋಗಿ ಜೊತೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಟಾಟಾ ಏಸ್ ಗೂಡ್ಸ್ ವಾಹನ ಹಿಂದಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಸವಾರ ಹಾರಿಸ್ ಸ್ಥಳದಲ್ಲೇ ಮೃತಪಟ್ಟರೆ, ಸಹಸವಾರ ಸಹೋದ್ಯೋಗಿ ಒಡಿಶಾ ಮೂಲದ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಹಾರಿಸ್ ಅವರ ಹೆತ್ತವರು ಹಾಗೂ ಓರ್ವ ಸಹೋದರ ಕಳೆದ ಕೆಲ ತಿಂಗಳ ಅವಧಿಯಲ್ಲಿ ಮೃತಪಟ್ಟಿದ್ದರು. ಇರುವ ಇನ್ನೋರ್ವ ಸಹೋದರ ಕೂಡಾ ಬೆಂಗಳೂರಿನಲ್ಲೇ ಜ್ಯುವೆಲ್ಲರಿ ಶಾಪಿನಲ್ಲಿ ಉದ್ಯೋಗಿಯಾದ್ದಾರೆ. ಹಾರಿಸ್ ಕಳೆದ ಆರು ತಿಂಗಳ ಹಿಂದಷ್ಟೇ ಕುಕ್ಕಾಜೆ ಮೂಲದ ಯುವತಿಯನ್ನು ವಿವಾಹವಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ್ದರಿಂದ ಪತ್ನಿಯನ್ನೂ ತನ್ನ ಜೊತೆ ಕರೆದುಕೊಂಡು ಬಂದಿದ್ದ. ಕಳೆದ ವಾರ ಸ್ಥಳೀಯ ಅಜಿಲಮೊಗರು ಉರೂಸ್ ಕಾರ್ಯಕ್ರಮದ ಹಿನ್ನಲೆಯಲ್ಲಿ ಪತ್ನಿಯೊಂದಿಗೆ ಊರಿಗೆ ಬಂದಿದ್ದ ಹಾರಿಸ್ ಪತ್ನಿಯನ್ನು ಮನೆಯಲ್ಲೇ ಬಿಟ್ಟು ಮೂರು ದಿನಗಳ ಹಿಂದಷ್ಟೇ ಮತ್ತೆ ಬೆಂಗಳೂರಿಗೆ ತೆರಳಿದ್ದ ಎನ್ನಲಾಗಿದೆ. ಮೃತದೇಹವನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬುಧವಾರ ಮುಂಜಾನೆ ವೇಳೆ ಊರಿಗೆ ತರಲಾಗಿದ್ದು, ಬೆಳಿಗ್ಗೆ 9.30ರ ವೇಳೆಗೆ ಪೆರಿಯಪಾದೆ ಜುಮಾ ಮಸೀದಿಯ ದಫನ ಭೂಮಿಯಲ್ಲಿ ತಂದೆ-ತಾಯಿ ಹಾಗೂ ಸಹೋದರ ಮೂವರ ದಫನ ನಡೆಸಿದ ಸ್ಥಳದ ಪಕ್ಕದಲ್ಲೇ ಈತನ ದಫನ ಕ್ರಿಯೆ ನಡೆಸಲಾಗಿದೆ ಎಂದು ತಿಳಿದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
















0 comments:
Post a Comment