ಬಂಟ್ವಾಳ, ಡಿಸೆಂಬರ್ 10, 2025 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಬಿ ಸಿ ರೋಡಿನ ಹಾರ್ಡ್ ವೇರ್ ಅಂಗಡಿಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ನಗದು ಹಾಗೂ ಹಾರ್ಡ್ ವೇರ್ ಸಾಮಾಗ್ರಿಗಳನ್ನು ಕಳವುಗೈದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಡಿ 8 ರಂದು ರಾತ್ರಿ ಅಂಗಡಿಗೆ ನುಗ್ಗಿದ ಕಳ್ಳರು 50 ಸಾವಿರಕ್ಕೂ ಅಧಿಕ ನಗದು ಸಹಿತ ಇತರ ಹಾರ್ಡ್ ವೇರ್ ಸಾಮಾಗ್ರಿಗಳು ಸೇರಿ ಒಟ್ಟು 85 ಸಾವಿರಕ್ಕೂ ಅಧಿಕ ಮೊತ್ತವನ್ನು ಕಳವುಗೈದಿದ್ದಾರೆ. ಈ ಬಗ್ಗೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಮೂಲತಃ ರಾಜಸ್ಥಾನ ನಿವಾಸಿ, ಪ್ರಸ್ತುತ ಬಿ ಸಿ ರೋಡಿನ ಕೃಷ್ಣಾನಂದ ಬಿಲ್ಡಿಂಗಿನಲ್ಲಿ ವಾಸವಾಗಿರುವ ಜೀತೇಂದ್ರ ಕುಮಾರ್ (26) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ಹೀರಾಲಾಲ್ ಎಂಬವರ ರಾಮ್ ದೇವ್ ಹಾರ್ಡ್ ವೇರ್ ಅಂಗಡಿಯಲ್ಲಿ ಸುಮಾರು 10 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಇವರ ಜೊತೆ ರವೀಂದ್ರ, ಹೀರಾಲಾಲ ಮತ್ತು ಮೋಕ್ಷಿತಾರವರು ಕೂಡ ಕೆಲಸ ಮಾಡಿಕೊಂಡಿರುತ್ತಾರೆ. ಇವರು ಪ್ರತಿ ದಿನ ಬೆಳಿಗ್ಗೆ 8 ಗಂಟೆಗೆ ಅಂಗಡಿ ತೆರೆದು ವ್ಯಾಪಾರದ ಬಳಿಕ ರಾತ್ರಿ 10 ಗಂಟೆಗೆ ಅಂಗಡಿ ಬಂದ್ ಮಾಡಿ ಹೋಗುತ್ತಿರುವುದಾಗಿದೆ. ಡಿ 8 ರಂದು ಬೆಳಿಗ್ಗೆ ಅಂಗಡಿ ತೆರೆದು ವ್ಯಾಪಾರ ಮಾಡಿ, ವ್ಯಾಪಾರವಾಗಿದ್ದ ಹಣ 50,100/- ರೂಪಾಯಿಯನ್ನು ಅಂಗಡಿಯ ಡ್ರಾವರಿನಲ್ಲಿರಿಸಿ ಬಳಿಕ 11.45 ಗಂಟೆಯವರೆಗೆ ಒಳಗೆ ಕೆಲಸ ಮಾಡಿ ಬಳಿಕ ಅಂಗಡಿ ಬಾಗಿಲು ಮುಚ್ಚಿ ಶಟರ್ ಲಾಕ್ ಮಾಡಿ ಹೋಗಿದ್ದರು. ಮರುದಿನ ಅಂದರೆ ಡಿ 9 ರಂದು ಬೆಳಿಗ್ಗೆ 8.15 ಗಂಟೆಗೆ ಇವರು ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಎದುರಿನ ಲಾಕ್ ಮುರಿದಿರುವುದು ಕಂಡು ಬಂದಿದೆ. ಶಟರ್ ತೆರೆದು ಒಳಗೆ ಹೋಗಿ ನೋಡಿದಾಗ ವ್ಯಾಪಾರ ಮಾಡಿ ಡ್ರಾವರಿನಲ್ಲಿರಿಸಿದ್ದ 50,100/- ರೂಪಾಯಿ ನಗದು ಹಣ ಹಾಗೂ ಹೊಸದಾಗಿ ಖರೀದಿಸಿ ಮಾರಾಟಕ್ಕೆಂದು ತಂದಿದ್ದ ನೀರಿನ ಪೈಪಿನ ಸಾಮಗ್ರಿಗಳು, ಬಾಗಿಲಿನ ಹಿತ್ತಾಳೆಯ ಸಾಮಗ್ರಿಗಳು ಮತ್ತು ಬಾತ್ ರೂಮ್ ಸಾಮಗ್ರಿಗಳು ಇರುವ ಹೊಸದಾದ ಬಾಕ್ಸ್ ಗಳು ಕೂಡಾ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳತನವಾಗಿರುವ ಸಾಮಾಗ್ರಿಗಳ ಒಟ್ಟು ಮೌಲ್ಯ 85,073/- ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ನೀಡಿರುವ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment