ಬಂಟ್ವಾಳ, ಡಿಸೆಂಬರ್ 14, 2025 (ಕರಾವಳಿ ಟೈಮ್ಸ್) : ತಾಲೂಕಿನ ತುಂಬೆ ಗ್ರಾಮದ ಹನುಮನಗರ ಎಂಬಲ್ಲಿ ಶನಿವಾರ ಸಂಜೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಗಾಂಜಾ, ವಾಹನ ಸಹಿತ ಇಬ್ಬರು ಖದೀಮರನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ತುಂಬೆ ನಿವಾಸಿ ಸಮೀರ್ (31) ಹಾಗೂ ಗೂಡಿನಬಳಿ ನಿವಾಸಿ ಮೊಹಮ್ಮದ್ ಅಸೀಫ್ (35) ಎಂದು ಹೆಸರಿಸಲಾಗಿದೆ.
ಶನಿವಾರ ಸಂಜೆ ತುಂಬೆ ಗ್ರಾಮದ ಹನಮನಗರ ಎಂಬಲ್ಲಿ, ರಾಷ್ಟ್ರೀಯ ಹೆದ್ದಾರಿ ಬಳಿ ಯಾರೋ ವ್ಯಕ್ತಿಗಳು ಅಕ್ರಮವಾಗಿ ನಿಷೇದಿತ ಮಾದಕ ವಸ್ತುವನ್ನು ಮಾರಾಟ ಮಾಡಲು ವಶದಲ್ಲಿಟ್ಟುಕೊಂಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಮಂಜುನಾಥ ಟಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ರಾಷ್ಟ್ರೀಯ ಹೆದ್ದಾರಿಯ ಪಕ್ಕ ನಿರ್ಜನ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಕೆಎ 19 ಎಂ ಎನ್ 3664 ನೊಂದಣಿ ಸಂಖ್ಯೆಯ ಕಾರು ಮತ್ತು ಕೆಎ 19 ಎಇ 0166 ನೊಂದಣಿ ಸಂಖ್ಯೆಯ ಆಟೋ ರಿಕ್ಷಾದ ಬಳಿ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದರು. ಅವರುಗಳನ್ನು ಪೊಲೀಸರು ಹಿಡಿದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳ ವಿಚಾರಣೆಯ ವೇಳೆ ತಾವುಗಳು ಅಧಿಕ ಹಣಗಳಿಸುವ ಉದ್ದೇಶದಿಂದ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ತಪಾಸಣೆ ನಡೆಸಿದಾಗ ಕಾರಿನಲ್ಲಿ 450 ಗ್ರಾಂ ಗಾಂಜಾ ಹಾಗೂ ರಿಕ್ಷಾದಲ್ಲಿ 360 ಗ್ರಾಂ ಗಾಂಜಾ ಪತ್ತೆಯಾಗಿದೆ.
ಮುಂದಿನ ಕಾನೂನು ಕ್ರಮಕ್ಕಾಗಿ ವಾಹನಗಳನ್ನು ಹಾಗೂ 810 ಗ್ರಾಂ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸ್ವಾಧೀನಪಡಿಸಲಾಗಿದ್ದು, ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 183/2025 ಕಲಂ 8(ಸಿ), 20(ಬಿ) ii (ಎ) ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.














0 comments:
Post a Comment