ಮಂಗಳೂರು, ಡಿಸೆಂಬರ್ 15, 2025 (ಕರಾವಳಿ ಟೈಮ್ಸ್) : ಸುರತ್ಕಲ್-ಮುಕ್ಕ ಸಸಿಹಿತ್ಲು ರಸ್ತೆಯ ಮಿತ್ರಪಟ್ಣ ಎಂಬಲ್ಲಿನ ಮಹಿಳೆಯ ಮನೆಗೆ ಹಂಚು ತೆಗೆದು ಒಳನುಗ್ಗಿ ಡಿಸೆಂಬರ್ 3 ರಂದು ಚಿನ್ನಾಭರಣ ಹಾಗೂ ನಗದು ದರೋಡೆಗೈದ ಪ್ರಕರಣವನ್ನು ಡಿ 14 ರಂದು ಬೇಧಿಸಿದ ಸುರತ್ಕಲ್ ಪೊಲೀಸರು ಮೂವರು ಕುಖ್ಯಾತ ಖದೀಮರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಸುರತ್ಕಲ್ ಗೊಡ್ಡೆ ಕೊಪ್ಲ ಶ್ರೀರಾಮ ಭಜನಾ ಮಂದಿರ ಬಳಿಯ ಶ್ರೀ ಸನ್ನಿಧಿ ಮನೆಯ ನಿವಾಸಿ ಹರಿಶ್ಚಂದ್ರ ಪುತ್ರನ್ ಎಂಬವರ ಪುತ್ರ ಶೈನ್ ಎಚ್ ಪುತ್ರನ್ ಅಲಿಯಾಸ್ ಶಯನ್ ಅಲಿಯಾಸ್ ಶೈನ್ (21), ಬೆಂಗಳೂರು ಎಲಚನಹಳ್ಳಿ ಕಾಶಿನಗರ ನಿವಾಸಿ ಕೆಂಡೆ ಗೌಡ ಅವರ ಪುತ್ರ ವಿನೋದ್ ಅಲಿಯಾಸ್ ಕೋತಿ ಅಲಿಯಾಸ್ ವಿನೋದ್ ಕುಮಾರ್ (33) ಹಾಗೂ ಬೆಂಗಳೂರು ಉಡಿಪಾಳ್ಯ ಕನಕಪುರ ನಿವಾಸಿ ನಾಗರಾಜ ಎಂಬವರ ಪುತ್ರ ಗಿರೀಶ್ ಅಲಿಯಾಸ್ ಸೈಕಲ್ ಗಿರಿ (28) ಎಂದು ಹೆಸರಿಸಲಾಗಿದೆ. ಇನ್ನೊರ್ವ ಆರೋಪಿಯಾದ ಜೈಸನ್ ಯಾನೆ ಲೆನ್ಸನ್ ಕಾರ್ಕಳ ಎಂಬಾತನು ತಲೆಮರೆಸಿಕೊಂಡಿರುತ್ತಾನೆ.
ಬಂಧಿತರಿಂದ 4.43 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್, 3 ಮೊಬೈಲ್ ಫೋನುಗಳು ಹಾಗೂ 3 ಸಾವಿರ ರೂಪಾಯಿ ನಗದನ್ನು ಮಹಜರು ಮುಖೇನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸುರತ್ಕಲ್ ಮುಕ್ಕ ಸಸಿಹಿತ್ಲು ರಸ್ತೆ ಮಿತ್ರ ಪಟ್ಣ ನಿವಾಸಿ ದಿವಂಗತ ಜಿನ್ನಪ್ಪ ಸುವರ್ಣ ಅವರ ಪತ್ನಿ ಶ್ರೀಮತಿ ಜಲಜ (85) ಅವರ ಮನೆಗೆ ಡಿ 3 ರಂದು ಸುಮಾರು 2.30 ಗಂಟೆಗೆ ಯಾರೋ ಅಪರಿಚಿತರು ಮನೆಯ ಬಾಗಿಲು ಬಡಿದು ಕುಡಿಯಲು ನೀರು ಬೇಕು ಬಾಗಿಲು ತೆರೆಯಿರಿ ಎಂದು ಹೇಳಿದ್ದು ಅದಕ್ಕೆ ಮಹಿಳೆ ಬಾಗಿಲು ತೆಗೆಯದೇ ಇದ್ದುದರಿಂದ ಆರೋಪಿತರು ಮನೆಯ ಹಂಚನ್ನು ತೆಗೆದು ಮನೆಯೊಳಗೆ ಪ್ರವೇಶಿಸಿ “ಬಂಗಾರ್ ಒಲ್ಪ ಉಂಡು” (ಬಂಗಾರ ಎಲ್ಲಿದೆ) ಎಂದು ತುಳುವಿನಲ್ಲಿ ಜೋರಾಗಿ ಬೆದರಿಸಿ, ಬೈರಾಸನ್ನು ಮಹಿಳೆಯ ಕುತ್ತಿಗೆಗೆ ಬಿಗಿದು “ಬೊಬ್ಬೆ ಪಾಡುಂಡ ಕೆರ್ಪೆ ಬಂಗಾರ್ ಇಜ್ಜಾ ಉಂಡಾ ತೂಪ ಎಂಕುಲ್, ಏರೆನ್ಲಾ ಲೆತ್ತ್‍ಂಡ ನಾಲಿಡ್ ಪತ್ತ್ದ್ ಕೆರ್ಪೆ” (ಬೊಬ್ಬೆ ಹೊಡೆದರೆ ಸಾಯಿಸುತ್ತೇನೆ ಬಂಗಾರ ಇದೆಯೋ ಇಲ್ಲವೋ ನೋಡುತ್ತೇನೆ ಯಾರನ್ನಾದರೂ ಕರೆದರೆ ಕುತ್ತಿಗೆ ಹಿಸುಕಿ ಸಾಯಿಸುತ್ತೇನೆ) ಎಂದು ತುಳುವಿನಲ್ಲಿ ಬೆದರಿಸಿ ಗೋದ್ರೇಜ್ ಕಪಾಟಿನಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ 2 ಚಿನ್ನದ ಬಳೆ ಹಾಗೂ ಪರ್ಸ್ ನಲ್ಲಿದ್ದ ಸುಮಾರು 14 ಸಾವಿರ ರೂಪಾಯಿ ನಗದು ಹಣವನ್ನು ದೋಚಲಾಗಿತ್ತು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ಠಾಣಾ ಪಿಎಸ್ಸೈ ರಘು ನಾಯಕ, ರಾಘವೇಂದ್ರ ನಾಯ್ಕ್ ಹಾಗೂ ಸಿಬ್ಬಂದಿಯವರ ತಂಡವನ್ನು ರಚಿಸಿ ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿ ಶೈನ್ ಎಚ್ ಪುತ್ರನ್ ಅಲಿಯಾಸ್ ಶಯನ್ ಅಲಿಯಾಸ್ ಶೈನ್ ಎಂಬಾತನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಆತನ ಹೇಳಿಕೆಯಂತೆ ಸದ್ರಿ ಕೃತ್ಯವನ್ನು ಜೈಸನ್ ಅಲಿಯಾಸ್ ಲೆನ್ಸನ್ ಕಾರ್ಕಳ ಎಂಬಾತನೊಂದಿಗೆ ಮಾಡಿರುವುದಾಗಿ ಬಂಗಾರವನ್ನು ಬೆಂಗಳೂರಿಗೆ ಹೋಗಿ ಗಿರೀಶ್ ಎಸ್ ಮತ್ತು ವಿನೋದ್ ಕುಮಾರ್ ಎಂಬವರಿಗೆ ಮಾರಿದ ಬಗ್ಗೆ ತಿಳಿಸಿದ್ದಾನೆ. ಅದರಂತೆ ಬೆಂಗಳೂರಿಗೆ ತೆರಳಿ ವಿನೋದ್ ಅಲಿಯಾಸ್ ಕೋತಿ ಅಲಿಯಾಸ್ ವಿನೋದ್ ಕುಮಾರ್ ಹಾಗೂ ಗಿರೀಶ್ ಅಲಿಯಾಸ್ ಸೈಕಲ್ ಗಿರಿ ಎಂಬವರನ್ನು ಡಿ 14 ರಂದು ವಶಕ್ಕೆ ಪಡೆಯಲಾಗಿದೆ. ಇನ್ನೊರ್ವ ಆರೋಪಿಯಾದ ಜೈಸನ್ ಯಾನೆ ಲೆನ್ಸನ್ ಕಾರ್ಕಳ ಎಂಬಾತನು ತಲೆಮರೆಸಿಕೊಂಡಿರುತ್ತಾನೆ.
ಶೈನ್ ಎಚ್. ಪುತ್ರನ್ ಎಂಬಾತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಗಾಂಜಾ ಸೇವನೆಯ 1 ಪ್ರಕರಣ ದಾಖಲಾಗಿರುತ್ತದೆ. ವಿನೋದ್ ಅಲಿಯಾಸ್ ಎಂಬಾತನ ಮೇಲೆ ಬೆಂಗಳೂರಿನ ಕೆ.ಎಸ್. ಲೇಔಟ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿರುತ್ತದೆ ಹಾಗೂ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 2 ಕೊಲೆ, 2 ಕೊಲೆಯತ್ನ, 4 ದರೋಡೆ, 1 ಬೆದರಿಕೆ, 1 ಗಾಂಜಾ ಮಾರಾಟ, 1 ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ಸಹಿತ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತವೆ. ಗಿರೀಶ್ ಸೈಕಲ್ ಗಿರಿ ಎಂಬಾತನ ಮೇಲೆ ಬೆಂಗಳೂರಿನ ಕಗ್ಗಲಿಪುರ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿರುತ್ತದೆ ಹಾಗೂ ಬೆಂಗಳೂರು ನಗರದ ವಿವಿಧ ಠಾಣೆಯಲ್ಲಿ 5 ಕೊಲೆಯತ್ನ, 1 ದರೋಡೆ, 3 ಹಲ್ಲೆ ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿರುತ್ತವೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಲಾಗಿದೆ.
ಆರೋಪಿಗಳ ಪತ್ತೆ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪ ವಿಭಾಗ) ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ ಪೆಕ್ಟರುಗಳಾದ ಪ್ರಮೋದ್ ಕುಮಾರ್ ಪಿ, ಪಿಎಸ್ಸೈಗಳಾದ ರಘು ನಾಯಕ್, ರಾಘವೇಂದ್ರ ನಾಯ್ಕ್, ಎಎಸ್ಸೈಗಳಾದ ರಾಧಾಕೃಷ್ಣ, ರಾಜೇಶ್ ಆಳ್ವ ಹಾಗೂ ಠಾಣಾ ಸಿಬ್ಬಂದಿಗಳಾದ ಅಣ್ಣಪ್ಪ, ಉಮೇಶ್, ಅಜಿತ್ ಮ್ಯಾಥ್ಯೂ, ತಿರುಪತಿ, ಕಾರ್ತಿಕ್, ವಿನೋದ್ ನಾಯ್ಕ್, ಸುನಿಲ್ ಕುಸನಾಳ, ಸತೀಶ ಸತ್ತಿಗೇರಿ, ಮಂಜುನಾಥ ಬೊಮ್ಮನಾಳ, ಹನುಮಂತ ಆಲೂರ ಅವರು ಕಾರ್ಯಾಚರಣೆ ನಡೆಸಿದ್ದಾರೆ.














0 comments:
Post a Comment