ಬಂಟ್ವಾಳ, ಡಿಸೆಂಬರ್ 21, 2025 (ಕರಾವಳಿ ಟೈಮ್ಸ್) : ಎಸ್ ಡಿ ಪಿ ಐ ವತಿಯಿಂದ ಡಿ 19 ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸುಳ್ಳು ಮಾಹಿತಿಗಳನ್ನೊಳಗೊಂಡು ಮಾಡಿದ ಭಾಷಣದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಪ್ರತಿಭಟನಾ ಸಭೆಯಲ್ಲಿ ಮಾಡಿದ ಭಾಷಣದ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಸದ್ರಿ ವಿಡಿಯೊ ತುಣುಕುಗಳನ್ನು ಪರಿಶೀಲಿಸಿದಾಗ ಹಲವು ಸುಳ್ಳು ಮಾಹಿತಿಗಳನ್ನು ಹಾಗೂ ನ್ಯಾಯಾಲಯಗಳ ಕೆಲವು ತೀರ್ಪುಗಳ ಆಯ್ದ ಭಾಗವನ್ನು ಮಾತ್ರ ಸಾರ್ವಜನಿಕರಿಗೆ ತಿಳಿಸಿ, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಸದ್ರಿ ದೂರಿನ ವಿಚಾರಣೆಯ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಧ ನ್ಯಾಯಾಲಯ ಕೆಲವು ತೀರ್ಪುಗಳ ಆಯ್ದ ಭಾಗವನ್ನು ಮಾತ್ರ ಓದಿದರೆ, ದೇಶದ್ರೋಹಿ ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ಎಸ್ ಡಿ ಪಿ ಐ ಪಾತ್ರವಹಿಸಿರುವಂತೆ ಬಿಂಬಿಸಬಹುದಾಗಿದೆ. ಉದಾಹರಣೆಗೆ 2023 ರ ಮೇ ತಿಂಗಳಲ್ಲಿ ಯುಎಪಿಎ ಕಾಯ್ದೆಯಡಿ ಎಸ್ ಡಿ ಪಿ ಐ ಮಂಗಳೂರು ಕಚೇರಿಯನ್ನು ಜಪ್ತಿ ಮಾಡಿರುವುದನ್ನು ಪ್ರಶ್ನಿಸಿ, ಎಸ್ ಡಿ ಪಿ ಐ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕದ ಉಚ್ಚ ನ್ಯಾಯಾಲಯವು ತಿರಸ್ಕರಿಸಿರುತ್ತದೆ. ಹಾಗಾದರೆ ಎಸ್ ಡಿ ಪಿ ಐ ಪಕ್ಷವು ಭಯೋತ್ಪಾದಕ ಸಂಘಟನೆಯೊಂದಿಗೆ ಕೈಜೋಡಿಸಿದೆ ಎಂದು ಹೇಳುವುದು ಸರಿಯಾಗುತ್ತದೆಯೇ? ಜಿಲ್ಲೆಯಲ್ಲಿ ಈ ಹಿಂದೆ ಕೋಮು ಧ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ, ಎಸ್ ಡಿ ಪಿ ಐ ಗ್ರಾಮ ಪಂಚಾಯತ್ ಸದಸ್ಯನೊಬ್ಬ ಕೊಲೆಯ ಆರೋಪಿಯಾಗಿದ್ದು, ಇನ್ನೂ ಜೈಲಿನಲ್ಲಿದ್ದಾನೆ. ವಿವಿಧ ನ್ಯಾಯಾಲಯಗಳು ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುತ್ತದೆ. ಇದೇ ರೀತಿ ನ್ಯಾಯಾಲಯಗಳ ತೀರ್ಪುಗಳ ಆಯ್ದ ಭಾಗವನ್ನು ಮಾತ್ರ ಓದಿ, ಎಸ್ ಡಿ ಪಿ ಐ ಸಂಚು ಮಾಡುವ ಮತ್ತು ಕೊಲೆಗಾರರ ಸಂಘಟನೆ ಎಂದು ಹೇಳುವುದು ಸರಿಯಾಗುತ್ತದೆಯೇ?. ಎಸ್ ಡಿ ಪಿ ಐಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸದಸ್ಯರುಗಳು ರಾಜೀನಾಮೆ ನೀಡಬೇಕು ಎಂದು ಹೇಳುವುದು ಸರಿಯಾಗುತ್ತದೆಯೇ? ನ್ಯಾಯಾಲಯಗಳ ತೀರ್ಪುಗಳ ಆಯ್ದ ಭಾಗವನ್ನು ಮಾತ್ರ ತಿಳಿಸುವುದು, ಕೆಲವರ ಸುಳ್ಳು ಸುದ್ದಿ ಪ್ರಸಾರದ ಒಂದು ಭಾಗ. ಇಂತಹ ಸುಳ್ಳು ಮಾಹಿತಿಯ ಪ್ರಶ್ನೆಗಳನ್ನು ಪ್ರತಿಭಟನಾಕಾರರು ಮೊದಲಾಗಿ, ತಮ್ಮಲ್ಲೇ ತಾವು ಕೇಳಿಕೊಂಡಲ್ಲಿ ಇಂತಹ ಕೃತ್ಯಗಳು ಕೊನೆಯಾಗಬಹುದಾಗಿದೆ. ಸಾರ್ವಜನಿಕರು ಕೂಡಾ ಇಂತಹ ಸಂಚುಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಕೋರಿದ್ದಾರೆ.














0 comments:
Post a Comment