ಬಂಟ್ವಾಳ, ಡಿಸೆಂಬರ್ 26, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯ ಕೆನರಾ ಬ್ಯಾಂಕ್ ಮುಂಭಾಗ ಮುಖ್ಯ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಕಳೆದ ಕೆಲವು ದಿನಗಳಿಂದ ನೀರು ಬೇಕಾಬಿಟ್ಟಿ ಪೋಲಾಗುತ್ತಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿದು ಪರಿಸರದೆಲ್ಲೆಡೆ ಹರಿದಾಡುತ್ತಿದ್ದು, ಈ ಬಗ್ಗೆ ಸ್ಥಳೀಯ ನಾಗರಿಕರು ಹಲವು ಬಾರಿ ಪುರಸಭಾಧಿಕಾರಿಗಳ ಗಮನಕ್ಕೆ ತಂದರೂ ಇನ್ನೂ ಕೂಡಾ ಯಾವುದೆ ಕ್ರಮ ಜರುಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಣೆಮಂಗಳೂರು ಮುಖ್ಯ ರಸ್ತೆಯ ಬ್ಯಾಂಕ್ ಎದುರಲ್ಲೇ ಈ ಪೈಪ್ ಒಡೆದ ಅಚಾತುರ್ಯ ಸಂಭವಿಸಿ ದಿನಗಳು ಕೆಲವು ಕಳೆದರೂ ಪುರಸಭಾಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ ಎನ್ನುವ ಸ್ಥಳೀಯರು ಪೈಪ್ ಒಡೆದು ಹರಿಯುವ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಕಿರಿ ಕಿರಿ ಅನುಭವಿಸುವಂತಾಗಿದೆ. ಪುರಸಭೆಗೆ ಇತ್ತೀಚೆಗಷ್ಟೆ ನೇಮಕವಾಗಿರುವ ನೂತನ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಖಡಕ್ ಖ್ಯಾತಿಯ ಅಧಿಕಾರಿ ಎನ್ನಲಾಗುತ್ತಿದ್ದು, ತಕ್ಷಣ ಅಧಿಕಾರಿ ಇತ್ತ ಕಡೆ ಗಮನ ಹರಿಸಿ ಪೈಪ್ ಒಡೆದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಜನ ಆಗ್ರಹಿಸಿದ್ದಾರೆ.




















0 comments:
Post a Comment