ಬಂಟ್ವಾಳ, ಜನವರಿ 22, 2026 (ಕರಾವಳಿ ಟೈಮ್ಸ್) : ಚಲಿಸುತ್ತಿದ್ದಾಗಲೇ ತಾಂತ್ರಿಕ ದೋಷದಿಂದ ಕಾರೊಂದು ಸುಟ್ಟು ಭಸ್ಮವಾದ ಘಟನೆ ಎಡಪದವು ರಾಜ್ಯ ಹೆದ್ದಾರಿಯ ಮುತ್ತೂರು ಸಮೀಪದ ನೂದೊಟ್ಟು ಎಂಬಲ್ಲಿ ಸಂಭವಿಸಿದೆ.
ಎಡಪದವು ನಿವಾಸಿ ಧೀರೇಶ್ ಎಂಬವರು ತಮ್ಮ ಕುಟುಂಬ ಸಹಿತ ಕಾರಿನಲ್ಲಿ ಬಂಟ್ವಾಳದಿಂದ ಎಡಪದವು ಕಡೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಈ ಅವಘಡ ಸಂಭವಿಸಿದೆ. ಹೆಡ್ ಲೈಟ್ ತಾಂತ್ರಿಕ ದೋಷದಿಂದ ಉಂಟಾದ ಶಾರ್ಟ್ ಸಕ್ರ್ಯೂಟಿನಿಂದಾಗಿ ಘಟನೆ ನಡೆದಿದೆ ಎನ್ನಲಾಗಿದೆ. ಬೆಂಕಿ ಅನಾಹುತದ ಬಗ್ಗೆ ಮುನ್ಸೂಚನೆ ಅರಿತ ಚಾಲಕ ತಕ್ಷಣ ಕಾರು ನಿಲ್ಲಿಸಿ ಕೆಳಗಿಳಿದ ಕಾರಣ ಸಂಭಾವ್ಯ ಅಪಾಯ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ.
ಕಾರಿನಲ್ಲಿದ್ದ ಚಾಲಕ-ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಪೂರ್ಣ ಕಾರಿಗೆ ಬೆಂಕಿ ಆವರಿಸಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರಾದರೂ ಅದಾಗಲೇ ಕಾರು ಸುಟ್ಡು ಹೋಗಿ ನಷ್ಟ ಸಂಭವಿಸಿದೆ.












0 comments:
Post a Comment