ಬಂಟ್ವಾಳ, ಜನವರಿ 22, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಕಚೇರಿಯಲ್ಲಿ ಗುತ್ತಿಗೆ ಆಧಾರಿತವಾಗಿ ನೇಮಕಗೊಂಡಿರುವ ಹಾಗೂ ಕನಿಷ್ಠ ವೇತನದಡಿ ಕೆಲಸ ಮಾಡುತ್ತಿರುವ ಹಲವು ಮಂದಿ ನೌಕರರು ಎರಡು ತಿಂಗಳ ವೇತನ ಪಾವತಿಗೆ ಬಾಕಿ ಇದೆ ಗುರುವಾರ ಪುರಸಭಾ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಅವರ ಸೂಚನೆಯಂತೆ ಸದ್ಯಕ್ಕೆ 22 ಮಂದಿ ಗುತ್ತಿಗೆ ನೌಕರರಿಗೆ ಬಾಕಿ ವೇತನ ಪಾವತಿಸಿ ಮುಂದಿನ ದಿನಗಳಲ್ಲಿ ಹೊಸ ಗುತ್ತಿಗೆ ಪ್ರಕಾರ ನೌಕರರನ್ನು ನೇಮಿಸಿಕೊಳ್ಳಲು ಹಾಗೂ ಕಾನೂನು ಬಾಹಿರವಾಗಿ ಕನಿಷ್ಠ ವೇತನ ಪಡೆದುಕೊಂಡು ಪುರಸಭಾ ಕಚೇರಿಯ ಒಳಗೆ ಕೆಲಸ ಮಾಡುತ್ತಿದ್ದ ಎಲ್ಲ ಕನಿಷ್ಠ ವೇತನ ಆಧಾರದಲ್ಲಿರುವ ಸುಮಾರು 12 ಮಂದಿ ನೌಕರರನ್ನು ಫೆಬ್ರವರಿ 1ರಿಂದ ಬಿಡುಗಡೆಗೊಳಿಸಲು ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ನಿಯಮ ಬಾಹಿರವಾಗಿ ಪುರಸಭೆಯಲ್ಲಿ ಕೆಲಸ ನಿರ್ವಹಿಸಿ ಅದೇ ಪುರಸಭಾ ಕಚೇರಿ ಆವರಣದಲ್ಲೇ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ವಿರುದ್ದ ಧಿಕ್ಕಾರ ಕೂಗಿ ಗುತ್ತಿಗೆ ನೌಕರರು ಕೆಲಸ ಕಳೆದುಕೊಂಡಂತಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಕನಿಷ್ಠ ವೇತನ ಎಂಬ ನಿಯಮ ಪುರಸಭೆಯಲ್ಲಿ ಇಲ್ಲದಿದ್ದರೂ ನಿಯಮ ಬಾಹಿರವಾಗಿ ನಿವೃತ್ತಿಯಾದ ನೌಕರ ಸಹಿತ ಇಬ್ಬರು ನೌಕರರು ಕಳೆದ 10 ವರ್ಷಗಳಿಂದ ಪುರಸಭಾ ನಿಧಿಯಿಂದ ಸುಮಾರು 30 ಲಕ್ಷದಷ್ಟು ವೇತನ ಪಡೆಯುತ್ತಿರುವ ಪ್ರಕರಣ ಬಂಟ್ವಾಳ ಪುರಸಭೆಯಲ್ಲಿ ನಡೆದಿದ್ದು, ಈ ಬಗ್ಗೆ ಕಳೆದ 10 ವರ್ಷಗಳವರೆಗಿನ ವೇತನ ಪಾವತಿ ಬೆಳವಣಿಗೆಗಳ ಬಗ್ಗೆ ಸೂಕ್ತ ತನಿಖೆ ನಡೆಸುವ ತೀರ್ಮಾನಕ್ಕೂ ಅಧಿಕಾರಿಗಳು ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಇದೂ ಅಲ್ಲದೆ ಪೈಪ್ ಲೈನ್ ಲೀಕೇಜ್ ಕಾಮಗಾರಿಯನ್ನು ನೂತನ ಮುಖ್ಯಾಧಿಕಾರಿ ಬಂದ ಬಳಿಕ ನಡೆಸಲಾಗಿದ್ದು, ಸುಮಾರು 20 ಲೀಕೇಜ್ ಕಾಮಗಾರಿಗಳನ್ನು ಕೇವಲ ಮೂರೂವರೆ ಸಾವಿರ ಮೊತ್ತದಲ್ಲಿ ಮಾಡಲಾಗಿದೆ. ಇದರಿಂದ ಈ ಹಿಂದಿನ ಲೀಕೇಜ್ ನಿರ್ವಹಣೆಗೆ ಹೋಲಿಸಿದೆ ಸುಮಾರು 2 ಲಕ್ಷದಷ್ಟು ಹಣ ಪುರಸಭೆಗೆ ಉಳಿಕೆಯಾಗಿದೆ ಎಂಬ ವಿಚಾರವನ್ನೂ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಇದೀಗ ಪುರಸಭಾ ಪ್ಲಂಬಿಂಗ್ ಕೆಲಸವನ್ನು ಪೌರ ಕಾರ್ಮಿಕರೇ ನಿರ್ವಹಿಸುತ್ತಿದ್ದಾರೆ. ಈ ಕ್ರಮದಿಂದ ಪುರಸಭಾ ನಿಧಿ ಮತ್ತಷ್ಟು ಉಳಿಕೆಯಾಗುವ ಸಾಧ್ಯತೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಬಂಟ್ವಾಳ ಪುರಸಭೆಯಲ್ಲಿ ಗುತ್ತಿಗೆ ಆಧಾರಿತವಾಗಿ 2 ಜೀಪ್ ಗಳಿದ್ದು, ಇದೂ ಕೂಡಾ ಇತರ ಪುರಸಭೆಗಳಿಗೆ ಹೋಲಿಸದೆ ಒಂದು ಹೆಚ್ಚುವರಿಯಾಗಿತ್ತು ಎನ್ನಲಾಗಿದ್ದು, ನಿಯಮಬಾಹಿರವಾಗಿರುವ ಒಂದು ಜೀಪನ್ನು ನೂತನ ಮುಖ್ಯಾಧಿಕಾರಿ ವಾಪಾಸು ಕರೆಸಿಕೊಳ್ಳಲು ತೀರ್ಮಾನಿಸಿದ್ದಾರೆ ಎಂಬ ಅಂಶವೂ ತಿಳಿದು ಬಂದಿದೆ.












0 comments:
Post a Comment