ಬಂಟ್ವಾಳ, ಜನವರಿ 09, 2026 (ಕರಾವಳಿ ಟೈಮ್ಸ್) : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬಳಿಗೆ ಬಂದ ಹೆಲ್ಮೆಟ್ ಧಾರಿ ಅಪರಿಚಿತ ಬೈಕ್ ಸವಾರನೋರ್ವ ದಾರಿ ಕೇಳುವ ನೆಪದಲ್ಲಿ ಕುತ್ತಿಗೆಯ ಚಿನ್ನದ ಕರಿಮಣಿ ಸರ ಎಗರಿಸಿದ ಘಟನೆ ವಗ್ಗ-ಕಾರಿಂಜ ರಸ್ತೆಯಲ್ಲಿ ಡಿ 8 ರಂದು ಸಂಭವಿಸಿದೆ.
ಕಾವಳಪಡೂರು ಗ್ರಾಮದ ನಿವಾಸಿ ಪದ್ಮಾವತಿ (55) ಅವರೇ ಹೆಲ್ಮೆಟ್ ಧಾರಿ ಬೈಕ್ ಸವಾರನ ದಾಳಿಗೆ ಒಳಗಾದ ಮಹಿಳೆ. ಇವರು ಡಿ 8 ರಂದು ಮಂಗಳೂರಿಗೆ ಹೋಗಿ ವಾಪಾಸು ಬಂದು ವಗ್ಗ ಜಂಕ್ಷನ್ನಿನಲ್ಲಿ ಬಸ್ಸಿಂದ ಇಳಿದು ತನ್ನ ಮನೆಯಾದ ಕಂಗಿತ್ತಿಲು ಎಂಬಲ್ಲಿಗೆ ಹೋಗುವರೇ ವಗ್ಗ-ಕಾರಿಂಜ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಂಜೆ ಸುಮಾರು 4.10ರ ವೇಳೆಗೆ ಅದೇ ರಸ್ತೆಯ ವಗ್ಗ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಒಬ್ಬಾತ ಅಪರಿಚಿತ ಹೆಲ್ಮೆಟ್ ಹಾಕಿಕೊಂಡು ಬಂದು ಮಹಿಳೆ ನಡೆದುಕೊಂಡು ಹೋಗುತ್ತಿದ್ದ ರಸ್ತೆಯ ಬದಿಗೆ ಆತನ ವಾಹನವನ್ನು ನಿಧಾನವಾಗಿ ಚಲಾಯಿಸಿಕೊಂಡು ಬಂದು ಮಹಿಳೆಯ ಬಳಿ ತುಳು ಭಾಷೆಯಲ್ಲಿ ಕಕ್ಕೆಪದವಿಗೆ ಹೋಗುವ ರಸ್ತೆ ಯಾವುದು ಎಂಬುದಾಗಿ ಕೇಳಿದ್ದಾನೆ. ಈ ಸಂದರ್ಭ ಮಹಿಳೆ ಕೈಸನ್ನೆ ಮಾಡಿ ಕಕ್ಕೆಪದವು ದಾರಿ ತೋರಿಸುತ್ತಿದ್ದಾಗ, ಆತ ತಕ್ಷಣ ಮಹಿಳೆಯ ಕೊರಳಿಗೆ ಕೈಹಾಕಿ ಧರಿಸಿದ್ದ ಚಿನ್ನದ ಕರಿಮಣಿ ಸರವನ್ನು ಕಸಿಯಲು ಪ್ರಯತ್ನಿಸಿದಾಗ ಮಹಿಳೆ ಕರಿಮಣಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು ಆತ ಕರಿಮಣಿ ಸರದ ತಾಳಿಯ ಭಾಗವನ್ನು ಎಳೆದಾಡಿದ್ದಾನೆ. ಕರಿಮಣಿ ಸರದ ತಾಳಿ ಮತ್ತು ತಾಳಿಯ ಭಾಗದ ಸ್ವಲ್ಪ ಭಾಗವನ್ನು ಆತ ಕಸಿದು ಕೊಂಡಾಗ ಮಹಿಳೆ ಜೋರಾಗಿ ಬೊಬ್ಬೆ ಹಾಕಿದಾಗ ಆತನು ಕಾರಿಂಜ ಕಡೆಗೆ ಆತನ ದ್ವಿಚಕ್ರವಾಹವನ್ನು ವೇಗವಾಗಿ ಚಲಾಯಿಸಿಕೊಂಡು ಕರಿಮಣಿ ಸರದ ತಾಳಿ ಮತ್ತು ಸ್ವಲ್ಪ ಭಾಗ ಕರಿಮಣಿ ಸರದೊಂದಿಗೆ ಪರಾರಿಯಾಗಿರುತ್ತಾನೆ. ಅಪರಿಚಿತ ವ್ಯಕ್ತಿ ಕಸಿದುಕೊಂಡು ಹೋದ ಕರಿಮಣಿ ಸರದ ತುಂಡು ಹಾಗೂ ಚಿನ್ನದ ತಾಳಿಯಲ್ಲಿ ಸುಮಾರು 5 ಗ್ರಾಂ ಚಿನ್ನವಿದ್ದು ಅದರ ಮೌಲ್ಯ 40,000/- ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















0 comments:
Post a Comment