ಮಂಗಳೂರು, ಜನವರಿ 04, 2026 (ಕರಾವಳಿ ಟೈಮ್ಸ್) : ಬಿಹಾರ ರಾಜ್ಯದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಬಜ್ಪೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಿಹಾರ ನಿವಾಸಿ ಸುನಿಲ್ ಕುಮಾರ್ (40) ಹಾಗೂ ಉತ್ತರ ಪ್ರದೇಶ ನಿವಾಸಿ ಬ್ರಿಜೇಶ್ ಶ್ರೀವಾತ್ಸವ (42) ಎಂದು ಹೆಸರಿಸಲಾಗಿದೆ. ಇಬ್ಬರು ಆರೋಪಿಗಳು ಪ್ರಸ್ತುತ ಸುರತ್ಕಲ್ ಸಮೀಪದ ಕಾಟಿಪಳ್ಳ-ಕೃಷ್ಣಾಪುರದಲ್ಲಿ ವಾಸವಾಗಿದ್ದಾರೆ. ಮಾದಕ ವಸ್ತು ಗಾಂಜಾವನ್ನು ಬಿಹಾರ ರಾಜ್ಯದಿಂದ ರೈಲು ಮೂಲಕ ಮಂಗಳೂರಿಗೆ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಶನಿವಾರ ಬಜಪೆ ಪೆÇಲೀಸ್ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಕ್ರಾಸ್ ಬಳಿ ರಸ್ತೆಯ ಬದಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸುಮಾರು 1 ಕೆಜಿ ತೂಕದ ಮಾದಕ ವಸ್ತು ಗಾಂಜಾವನ್ನು ಪೊಲೀಸರು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಮಾದಕ ವಸ್ತು ಗಾಂಜಾವನ್ನು ಬಿಹಾರ ರಾಜ್ಯದಲ್ಲಿ ಖರೀದಿಸಿ ರೈಲಿನಲ್ಲಿ ಮಂಗಳೂರಿಗೆ ತಂದು ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಜ್ಪೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



















0 comments:
Post a Comment