ಬಂಟ್ವಾಳ, ಜನವರಿ 02, 2026 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಚ್ಚಿನ ಗ್ರಾಮದ ಕುದ್ರಡ್ಕ-ಪಿತ್ತಿಲಗುರಿ ಎಂಬಲ್ಲಿನ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು, ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ಕಳವುಗೈದ ಘಟನೆ ಜನವರಿ 1 ರಂದು ಮುಂಜಾನೆ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಅಬ್ದುಲ್ ಕರೀಂ ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದ್ದು, ಈ ಬಗ್ಗೆ ಅವರ ಪುತ್ರ ಮಹಮ್ಮದ್ ನವಾಜ್ (26) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಜನವರಿ 1 ರಂದು ಬೆಳಿಗ್ಗೆ 6.15ರ ವೇಳೆಗೆ ಕಳ್ಳರು ಕಳವು ಕೃತ್ಯ ನಡೆಸಿದ್ದು, ಮನೆಯ ಹಿಂಬಾಗಿಲ ಚಿಲಕ ತೆರೆದು ಒಳನುಗ್ಗಿದ ಕಳ್ಳರು ಮನೆಯ ಗೋಡೆಯ ಸ್ಟಾಂಡಿನಲ್ಲಿದ್ದ 7 ಸಾವಿರ ರೂಪಾಯಿ ಮೌಲ್ಯದ ಮೊಬೈಲ್, ಪರ್ಸನ್ನು ಎಗರಿಸಿ ಅದರಲ್ಲಿದ್ದ 3 ಸಾವಿರ ರೂಪಾಯಿ ನಗದು ತೆಗೆದುದಲ್ಲದೆ ಪರ್ಸಿನಲ್ಲಿದ್ದ ಕೀ ಉಪಯೋಗಿಸಿ ಮನೆಯ ಕೋಣೆಯ ಗೋದ್ರೆಜ್ ಲಾಕರ್ ತೆರೆದು ಅದರಲ್ಲಿದ್ದ ತಂಗಿಯ ಮದುವೆ ನಿಶ್ಚಿತಾರ್ಥ ಪ್ರಯುಕ್ತ ವರನ ಕಡೆಯವರು ತಿಂಗಳ ಹಿಂದೆ ಕಟ್ಟಿದ್ದ 60 ಸಾವಿರ ರೂಪಾಯಿ ಮೌಲ್ಯದ 6 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್, ಮದುವೆ ಖರ್ಚಿಗೆಂದು ಇಟ್ಟಿದ್ದ 1,52,500/- ರೂಪಾಯಿ ನಗದು ಹಣ ಕಳವುಗೈದಿದ್ದಾರೆ. ಕಳವಾಗಿರುವ ನಗದು ಸಹಿತ ಸೊತ್ತುಗಳ ಒಟ್ಟು ಮೌಲ್ಯ 2,22,500/- ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ನವಾಜ್ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















0 comments:
Post a Comment