ಬಿ.ಸಿ.ರೋಡು : ರೈಲಿನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ಮೈಸೂರು ಮೂಲದ ಮಹಿಳೆ - Karavali Times ಬಿ.ಸಿ.ರೋಡು : ರೈಲಿನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ಮೈಸೂರು ಮೂಲದ ಮಹಿಳೆ - Karavali Times

728x90

26 April 2026

ಬಿ.ಸಿ.ರೋಡು : ರೈಲಿನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ಮೈಸೂರು ಮೂಲದ ಮಹಿಳೆ

ಬಂಟ್ವಾಳ, ಎಪ್ರಿಲ್ 27, 2026 (ಕರಾವಳಿ ಟೈಮ್ಸ್) : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೋರ್ವರು ಪ್ರಸವ ವೇದನೆ ಕಾಣಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಬಿ ಸಿ ರೋಡು ರೈಲ್ವೇ ನಿಲ್ದಾಣದಲ್ಲಿ ಭಾನುವಾರ ರಾತ್ರಿ ವೇಳೆ ಸಂಭವಿಸಿದೆ.

ಮೈಸೂರು ಮೂಲದ ನಿವಾಸಿ ಪೊನ್ನಮ್ಮ ಅವರೇ ರೈಲು ಗಾಡಿಯ ಬೋಗಿಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ ಎಂದು ತಿಳಿದು ಬಂದಿದೆ.

ಮಂಗಳೂರು-ಬೆಂಗಳೂರು ನಡುವೆ ಸಂಚಾರದ ರೈಲಿನಲ್ಲಿ ಈ ಘಟನೆ ಸಂಭವಿಸಿದೆ. ಮಂಗಳೂರಿನಲ್ಲಿ ರೈಲು ಹತ್ತಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿ ಪೊನ್ನಮ್ಮಳಿಗೆ ಹಠಾತ್ ಆಗಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಅದೇ ರೈಲಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ಅವರನ್ನು ಆರಂಭದಲ್ಲಿ ಉಪಚರಿಸಿ, ಬಳಿಕ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಪಂದಿಸಿದ ರೈಲ್ವೆ ಇಲಾಖೆ  ಬಿಸಿರೋಡಿನ ನಿಲ್ದಾಣದಲ್ಲಿ ಗಾಡಿಯನ್ನು ನಿಲ್ಲಿಸಿ, ಸ್ಥಳೀಯ ಸೋಮಯಾಜಿ ಆಸ್ಪತ್ರೆಯ ವೈದ್ಯರ ತಂಡವನ್ನು ಸ್ಥಳಕ್ಕೆ ಕರೆಸಿಕೊಂಡು ರೈಲು ಬೋಗಿಯೊಳಗೆ ಹೆರಿಗೆಗಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ವೈದ್ಯರ ತಂಡ ಯಶಸ್ವಿಯಾಗಿ ಮಹಿಳೆಗೆ ಹೆರಿಗೆ ಮಾಡಿಸಿದೆ.

ಬಳಿಕ ತಕ್ಷಣ ಅಂಬ್ಯುಲೆನ್ಸ್ ಕರೆಸಿ ಮಗು ಹಾಗೂ ತಾಯಿಯನ್ನು ವೈದ್ಯರ ತಂಡ ಬಿ ಸಿ ರೋಡಿನ ಸೋಮಯಾಜಿ‌ ಆಸ್ಪತ್ರೆಗೆ ಸಾಗಿಸಿ ಸೂಕ್ತ ಪರೀಕ್ಷೆ ನಡೆಸಿ, ತಾಯಿ-ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದಾರೆ.

ತಾಯಿ-ಮಗು ಆರೋಗ್ಯದಿಂದ ಇದ್ದರೂ ಕೂಡ ಹೆಚ್ಚಿನ ಚಿಕಿತ್ಸೆಯ ಸಲುವಾಗಿ ಮಂಗಳೂರಿಗೆ ಸಾಗಿಸಲಾಗಿದೆ ಎಂದು ವೈದ್ಯರ ತಂಡ ತಿಳಿಸಿವೆ.

ಬಿ ಸಿ ರೋಡಿಗೆ 7.20ಕ್ಕೆ ಬಂದಿದ್ದ ರೈಲು ಸುಮಾರು ಒಂದು ತಾಸುಗಳ ಕಾಲ ಬಿ ಸಿ ರೋಡು ನಿಲ್ದಾಣದಲ್ಲಿ ನಿಂತು, ಮಹಿಳೆಯ ಹೆರಿಗೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂದರೆ 8.20ಕ್ಕೆ ಮತ್ತೆ ರೈಲು ಗಾಡಿ ಪ್ರಯಾಣ ಮುಂದುವರೆಸಿದೆ.

ಸ್ಥಳೀಯ ನಿವಾಸಿ ಸಮದ್ ಕೈಕಂಬ ನೇತೃತ್ವದ ಸಾರ್ವಜನಿಕರು ಹಾಗೂ ಬಂಟ್ವಾಳ ನಗರ ಠಾಣಾ ಪೋಲೀಸರು ಮಹಿಳೆಯ ಹೆರಿಗಾಗಿ ಸಕಲ ವ್ಯವಸ್ಥೆಯನ್ನು ಮಾಡಿದ್ದಾರೆ. ಮಂಗಳೂರು ರೈಲ್ವೆ ಇಲಾಖೆಯ ಪೋಲೀಸರ ತಂಡ ಕೂಡ ಆಗಮಿಸಿದ್ದು ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ. 

ಪೊನ್ನಮ್ಮ ಅವರು ಮಂಗಳೂರಿನಲ್ಲಿ ಉದ್ಯೋಗಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ರೈಲಿನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ಮೈಸೂರು ಮೂಲದ ಮಹಿಳೆ Rating: 5 Reviewed By: lk
Scroll to Top