ಬಂಟ್ವಾಳ, ಫೆಬ್ರವರಿ 24, 2026 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಅಕ್ರಮ-ಸಕ್ರಮ ಸಮಿತಿಯನ್ನು ಸರಕಾರ ನೇಮಿಸಿ ವರ್ಷಗಳೇ ಕಳೆದರೂ ಒಂದೇ ಒಂದು ಸಭೆ ನಡೆಯದೆ ಅರ್ಜಿದಾರರು ಕಾಯುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ. ಈಗಾಗಲೇ ತಾಲೂಕಿನಲ್ಲಿ ಫಾರಂ 57ಗೆ ಸಂಬಂಧಿಸಿದಂತೆ ಸುಮಾರು 20 ಸಾವಿರಕ್ಕೂ ಮಿಕ್ಕಿದ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿದ್ದು, ಸಮಿತಿ ಸಭೆ ಸೇರದ ಪರಿಣಾಮ ಇದ್ಯಾವುದೂ ಇತ್ಯರ್ಥವಾಗಿಲ್ಲ ಎಂದು ತಿಳಿದು ಬಂದಿದೆ.
ಅರ್ಜಿದಾರರು ತಮ್ಮ ಅರ್ಜಿಗೆ ಸಂಬಂಧಿಸಿದಂತೆ ನಿರಂತರವಾಗಿ ತಾಲೂಕು ಕಚೇರಿಗೆ ಬಂದು ಮಾಹಿತಿಗಾಗಿ ಪ್ರಯತ್ನಪಟ್ಟು ಯಾವುದೇ ಪರಿಹಾರ ಕಾಣದೆ ಬಂದ ದಾರಿಗೆ ಸುಂಕ ಇಲ್ಲದಂತೆ ನಿತ್ಯವೂ ಅಲೆದಾಟ ನಡೆಸುತ್ತಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿದೆ. ಈ ಬಗ್ಗೆ ಅರ್ಜಿದಾರರು ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ತಮ್ಮ ಅಹವಾಲು ಸಲ್ಲಿಸುತ್ತಲೇ ಇದ್ದರೂ ಇದುವರೆಗೂ ಯಾವುದೇ ಪರಿಹಾರ ಮಾತ್ರ ಕಾಣುತ್ತಿಲ್ಲ.
ಅರ್ಜಿದಾರರು ತಮ್ಮ ಅರ್ಜಿಗಳಿಗೆ ಮಂಜೂರಾತಿ ದೊರೆಯದೆ ಮನೆಗಳ ದುರಸ್ತಿಯಾಗಲೀ, ಕೃಷಿ-ಕೃತಾವಳಿಗಳ ಅಭಿವೃದ್ದಿ ಮಾಡುವರೇ ಅವಕಾಶ ಇಲ್ಲದೆ ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ ಎನ್ನುವ ಕೃಷಿಕರು ಸ್ಥಳೀಯ ಶಾಸಕರು ಈ ಬಗ್ಗೆ ಗಮನ ಹರಿಸಿ ಶೀಘ್ರದಲ್ಲಿ ಅಕ್ರಮ-ಸಕ್ರಮ ಸಮಿತಿಯ ಸಭೆ ಕರೆದು ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.















0 comments:
Post a Comment