ಬಂಟ್ವಾಳ, ಫೆಬ್ರವರಿ 24, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಲ್ಲಿ ಕಳೆದ ಏಳು ವರ್ಷಗಳ ಹಿಂದೆ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣ ಸುಂದರವಾಗಿ ನಿರ್ಮಾಣಗೊಂಡಿದ್ದರೂ ಅದು ಪೂರ್ಣಪ್ರಮಾಣದಲ್ಲಿ ಬಳಕೆಯಾಗುವ ರೀತಿಯ ಯಾವುದೇ ವ್ಯವಸ್ಥೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಬಸ್ ನಿಲ್ದಾಣ ಸುಸಜ್ಜಿತವಾಗಿದ್ದರೂ ನಿಲ್ದಾಣಕ್ಕೆ ಬರುವ ಸಾರ್ವಜನಿಕ ವಾಹನಗಳಿಗೆ ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲಿಲ್ಲ. ಮಂಗಳೂರಿನಿಂದ ಬರುವ ಯಾವುದೇ ಬಸ್ಸುಗಳು ನಿಲ್ದಾಣ ಪ್ರವೇಶಿಸಲು ಬೇಕಾದ ವ್ಯವಸ್ಥೆ ಇನ್ನೂ ಆಗಿಲ್ಲ.
ಬಸ್ ನಿಲ್ದಾಣಕ್ಕೆ ವಿವಿಧ ಕೆಲಸಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನ ನಿಲ್ಲಿಸಲು ಸೂಕ್ತ ವ್ಯವಸ್ಥೆ ನಿಲ್ದಾಣದ ಸುತ್ತ ಎಲ್ಲೂ ಇಲ್ಲ. ನಿಲ್ದಾಣದ ನೆಲ ಅಂತಸ್ತಿನಲ್ಲಿ ವಾಹನ ನಿಲುಗಡೆ ಎಂಬ ವ್ಯವಸ್ಥೆ ನಾಮಫಲಕ ಅಳವಡಿಸಿ ಇದ್ದರೂ ಅದಿನ್ನೂ ಉಪಯೋಗಕ್ಕೆ ಬಂದಿಲ್ಲ. ಅದನ್ನು ಗೇಟು ಅಳವಡಿಸಿ ಬಂದ್ ಮಾಡಲಾಗಿದೆ. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದೆ ನಿತ್ಯವೂ ನಿಲ್ದಾಣದ ಎದುರುಗಡೆ ನಿತ್ಯವೂ ವಾಹನಗಳ ಪಾರ್ಕಿಂಗ್ ಕಂಡು ಬರುತ್ತಿದ್ದು, ನಿಲ್ದಾಣ ಪ್ರವೇಶಿಸಲು ಜನರಿಗೆ ಜಾಗ ಇಲ್ಲದ ಪರಿಸ್ಥಿತಿ ಕಂಡು ಬರುತ್ತಿದೆ.
ಮಂಗಳೂರಿನಿಂದ ಬರುವ ಯಾವುದೇ ಬಸ್‍ಗಳು ಬಸ್ ನಿಲ್ದಾಣ ಪ್ರವೇಶ ಮಾಡದೆ ಇರುವುದರಿಂದ ಪ್ರಯಾಣಿಕರು ಬಸ್ಸಿಗಾಗಿ ಹೆದ್ದಾರಿಯ ಎಲ್ಲೆಂದರಲ್ಲಿ ನಿಂತು ಕಾಯಬೇಕಾದ ಸನ್ನಿವೇಶ ಕಂಡು ಬರುತ್ತಿದೆ. ಬಸ್ ನಿಲ್ದಾಣದ ಎದುರು ಹೆದ್ದಾರಿಯಲ್ಲಿ ಬಸ್ಸುಗಳ ತಿರುಗುವಿಕೆಗೆ ಅನುಕೂಲವಾಗುವಂತೆ ವೃತ್ತ ನಿರ್ಮಾಣದ ಯೋಜನೆ ಬಗ್ಗೆ ಚರ್ಚೆ ನಡೆಸಲಾಗಿತ್ತಾದರೂ ಅದಿನ್ನೂ ಕಾರ್ಯಗತಗೊಂಡಿಲ್ಲ. ಬಸ್ ನಿಲ್ದಾಣ ನಿರ್ಮಾಣದ ಆರಂಭದ ಕೆಲ ದಿನಗಳ ಕಾಲ ಮಂಗಳೂರಿನಿಂದ ಬರುವ ಬಸ್ಸುಗಳು ಬಿ ಸಿ ರೋಡು ಜಂಕ್ಷನ್ನಿನಲ್ಲಿ ತಿರುವು ಪಡೆದುಕೊಂಡು ಬಸ್ ನಿಲ್ದಾಣ ಪ್ರವೇಶಿಸಿಯೇ ವಾಪಾಸು ಬರುತ್ತಿತ್ತು. ಆದರೆ ಕ್ರಮೇಣ ಇದು ಬಿ ಸಿ ರೋಡು ಪೇಟೆಯ ಟ್ರಾಫಿಕ್ ಜಂಜಾಟ ಕಾರಣದಿಂದ ಸುತ್ತು ಬಳಸಿ ನಿಲ್ದಾಣ ಪ್ರವೇಶಿಸುವ ಪ್ರಮೇಯ ನಿಂತು ಹೋಗಿದೆ. ಈ ಕಾರಣಕ್ಕಾಗಿ ಸುಸಜ್ಜಿತ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಜನರ ಪ್ರವೇಶ ಇಲ್ಲದೆ ಇನ್ನೂ ಕೂಡಾ ಬಿಕೋ ಎನ್ನುತ್ತಲೇ ಇದೆ. ಸೂಕ್ತ ವ್ಯವಸ್ಥೆ ಇಲ್ಲದೆ ನಿಲ್ದಾಣಕ್ಕೆ ಜನ ಬರುತ್ತಿಲ್ಲ. ಜನ ಸಂಚಾರ ಇಲ್ಲದೆ ಇರುವುದರಿಂದ ಇಲ್ಲಿನ ಅಂಗಡಿಗಳನ್ನು ಪಡೆದುಕೊಳ್ಳಲು ವ್ಯಾಪಾರ-ವಹಿವಾಟು ನಡೆಸಲು ಉದ್ಯಮಿಗಳೂ ಮುಂದೆ ಬರುತ್ತಿಲ್ಲ. ಇದರಿಂದಾಗಿ ನಿಗಮಕ್ಕೆ ಬರುವ ಆದಾಯಕ್ಕೂ ಭಾರೀ ಪ್ರಮಾಣದಲ್ಲಿ ಹೊಡೆತ ಬೀಳುತ್ತಿದೆ. ಸುಸಜ್ಜಿತ ಬಸ್ ನಿಲ್ದಾಣ ಸರಕಾರ ನಿರ್ಮಿಸಿದರೂ, ಇಲ್ಲಿ ನಿಗಮಕ್ಕೆ ಆದಾಯ ತರುವ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದ್ಯಾವುದೂ ಕಾರ್ಯರೂಪಕ್ಕೆ ಬರದೆ ಎಲ್ಲವೂ ನೆನೆಗುದಿಗೆ ಬಿದ್ದಿದೆ. ಸಂಬಂಧಪಟ್ಟವರು ತಕ್ಷಣ ಇಲ್ಲಿನ ಬಸ್ ನಿಲ್ದಾಣದ ಅವ್ಯವಸ್ಥೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಕಲ ವ್ಯವಸ್ಥೆ ಕಲ್ಪಿಸುವಂತೆ ಜನ ಆಗ್ರಹಿಸಿದ್ದಾರೆ.


















0 comments:
Post a Comment