ಫೆಬ್ರವರಿ 20 ರಿಂದ 28ರವರೆಗೆ ಮಂಗಳೂರಿನಲ್ಲಿ ಮಹಿಳೆಯರ ಉತ್ಪನ್ನಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ - Karavali Times ಫೆಬ್ರವರಿ 20 ರಿಂದ 28ರವರೆಗೆ ಮಂಗಳೂರಿನಲ್ಲಿ ಮಹಿಳೆಯರ ಉತ್ಪನ್ನಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ - Karavali Times

728x90

17 February 2026

ಫೆಬ್ರವರಿ 20 ರಿಂದ 28ರವರೆಗೆ ಮಂಗಳೂರಿನಲ್ಲಿ ಮಹಿಳೆಯರ ಉತ್ಪನ್ನಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ

ಮಂಗಳೂರು, ಫೆಬ್ರವರಿ 17, 2026 (ಕರಾವಳಿ ಟೈಮ್ಸ್) : ಕಡಲ ನಗರಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ನಮ್ಮ ಸರಸ್ ಮೇಳ-2026 ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಫೆಬ್ರವರಿ 20 ರಿಂದ 28 ರವರೆಗೆ ಕರಾವಳಿ ಮೈದಾನದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಾಡೆ ಕಾರ್ಭಾರಿ ಹೇಳಿದರು. 

ಮಂಗಳವಾರ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದಲ್ಲಿ ಅಭಿಯಾನದಡಿ 3.05 ಲಕ್ಷ ಸ್ವ-ಸಹಾಯ ಗುಂಪುಗಳಡಿ 32 ಲಕ್ಷ ಕುಟುಂಬಗಳನ್ನು ಗ್ರಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನದಡಿ ಹಾಗೂ 39 ಸಾವಿರ ಸ್ವ-ಸಹಾಯ ಗುಂಪುಗಳಡಿ 3.90 ಲಕ್ಷ ಕುಟುಂಬಗಳನ್ನು ನಗರ ಅಭಿಯಾನದಡಿ ಸಂಘಟಿಸಲಾಗಿರುತ್ತದೆ. ಪ್ರತಿಯೊಬ್ಬ ಸ್ವ-ಸಹಾಯ ಗುಂಪಿನ ಮಹಿಳೆಯರು ಜೀವನೋಪಾಯದೊಂದಿಗೆ ಸ್ವಾವಲಂಬನೆಯ ಜೀವನವನ್ನು ನಿರ್ವಹಿಸುವಲ್ಲಿ ಅವಶ್ಯಕ ಸಾಮರ್ಥ್ಯಾಭಿವೃದ್ಧಿ ಕೌಶಲ್ಯ ತರಬೇತಿಗಳು ಉತ್ಪನ್ನಗಳ ಬ್ರ್ಯಾಂಡಿಂಗ್ ಪ್ಯಾಕಿಂಗ್ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಮಹಿಳೆಯರು ಸಬಲೀಕರಣಕ್ಕಾಗಿ ನಿರಂತರ ಬೆಂಬಲಿಸಲಾಗುತ್ತಿದೆ ಎಂದರು. 

ಅಭಿಯಾನದಡಿ ಪ್ರಮುಖವಾಗಿ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಕೇವಲ ಜೀವನೋಪಾಯ ಚಟುವಟಿಕೆ ಕೈಗೊಳ್ಳಲು ಬೆಂಬಲಿಸುವುದು ಅಷ್ಟೇ ಅಲ್ಲದೇ, ಅವರ ಹಾಗೂ ಅವರ ಕುಟುಂಬದ ಸಮಗ್ರ ಅಭಿವೃದ್ಧಿಗಾಗಿ ಲಿಂಗತ್ವ ಸಮಾನತೆ, ಆಹಾರ, ಪೌಷ್ಠಿಕತೆ, ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರಗಳಲ್ಲಿ ಅಜ್ಞಾನ ಮತ್ತು ಮೂಢ ನಂಬಿಕೆಗಳ ವಿರುದ್ಧ ಜಾಗೃತಿ, ಶಿಕ್ಷಣ ಮತ್ತು ಅವಶ್ಯಕ ಜ್ಞಾನ ಒದಗಿಸುವ ಹಲವಾರು ಚಟುವಟಿಕೆಗಳನ್ನು ಗ್ರಾಮ ಮಟ್ಟದಲ್ಲಿ ಸಂಘಟಿಸುವ ಮೂಲಕ ಮಹಿಳೆಯರು ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸಬಲರಾಗಲು ಪೂರಕ ವೇದಿಕೆಗಳನ್ನು ಕಲ್ಪಿಸಲಾಗುತ್ತಿದೆ ಎಂದ ಅವರು, ರಾಜ್ಯದಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ಹಳ್ಳಿಸಂತೆ, ತಾಲ್ಲೂಕು ಮಟ್ಟದಲ್ಲಿ ಮಾಸಿಕ ಸಂತೆ, ಜಿಲ್ಲಾ ವಸ್ತು ಪ್ರದರ್ಶನ ಮಾರಾಟ ಮೇಳ ಏರ್ಪಡಿಸುವುದಷ್ಟೆ ಅಲ್ಲದೆ ಇತರೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುವ ಮೇಳಗಳಿಗೆ ರಾಜ್ಯದ ಮಹಿಳೆಯರನ್ನು ನಿಯೋಜನೆ ಮಾಡುವ ಮೂಲಕ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಾಗುತ್ತಿದೆ ಎಂದರು. 

15 ವಿವಿಧ ರಾಜ್ಯ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳೊಂದಿಗೆ ಭಾಗವಹಿಸುತ್ತಿದ್ದು, 120 ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಪ್ರತ್ಯೇಕವಾಗಿ ಆಹಾರ ಮೇಳದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ 30 ಲೈವ್ ಫುಡ್ ಕೋರ್ಟ್ ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮೇಳಕ್ಕೆ ಸಾರ್ವಜನಿಕರಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಫೆ 20 ರಿಂದ 28ರವರೆಗೆ ಪ್ರತಿ ದಿನ ಬೆಳಿಗ್ಗೆ 10.30 ರಿಂದ ರಾತ್ರಿ 9.30ರವರೆಗೆ ಮೇಳದ ಪ್ರದರ್ಶನಕ್ಕೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದ ಸಿಇಒ ಮಂಗಳೂರಿನ ಈ ಮೇಳದ ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಮೊಳಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು, ರೇಷ್ಮೆ ಸೀರೆಗಳು, ವಿವಿಧ ಆಕರ್ಷಣೆಯ ಬಟ್ಟೆಗಳು, ನಾರಿನ ಉತ್ಪನ್ನದ ಬ್ಯಾಗುಗಳು, ಮಸಾಲಾ ಉತ್ಪನ್ನಗಳು, ಸಿರಿಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಖಾದಿ ಉತ್ಪನ್ನಗಳು, ಬಾಳೆ ನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಉತ್ಪನ್ನಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ಎಂದರು. 

“ಅಕ್ಕ-ಕೆಫೆ” ಸರ್ಕಾರವು 2024-25 ಹಾಗೂ 2025-26ನೇಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ ಈಗಾಗಲೇ 23 ‘ಅಕ್ಕ ಕೆಫೆ’ ಗಳನ್ನು ಒಂದೇ ಮಾದರಿ ವಿನ್ಯಾಸದಡಿ ಕಾರ್ಯನಿರ್ವಹಿಸುತ್ತಿದ್ದು, 39 ಅಕ್ಕ ಕೆಫೆಗಳ ಅನುಷ್ಠಾನ ಪ್ರಗತಿಯಲ್ಲಿದ್ದು ಒಟ್ಟು 200ಕ್ಕೂ ಅಧಿಕ ಅಕ್ಕ ಕೆಫೆಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ. ಸದರಿ ಕಾರ್ಯಕ್ರಮದಡಿ ಪ್ರತಿ ಅಕ್ಕ ಕೆಫೆಯಡಿ 5-6 ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಜೀವನೋಪಾಯಕ್ಕೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಮುಂದುವರೆದು,‘ಅಕ್ಕ-ಕೆಫೆ’ ಕಾರ್ಯಕ್ರಮದ ಭಾಗವಾಗಿ ಈ ಮೇಳದ ಮೈದಾನದಲ್ಲಿನ “ಅಕ್ಕ-ಕೆಫೆ” (ಅಕ್ಕ ಫುಡ್ ಕೋರ್ಟ್)ನಲ್ಲಿ ಶೀರ್ಷಿಕೆಯಡಿ ಆಕರ್ಷಣೀಯವಾಗಿ ಆಯೋಜಿಸಲಾಗುತ್ತಿದೆ ಎಂದ ಅವರು, ಈ ಅಕ್ಕ ಆಹಾರ ಮಳಿಗೆಗಳಲ್ಲಿ (ಅಕ್ಕ ಫುಡ್ ಕೋರ್ಟ್)ನಲ್ಲಿ ಉತ್ತರ ಕರ್ನಾಟಕದಲ್ಲಿ ಹೆಸರು ವಾಸಿಯಾದ ಗಿರಮಿಟ್/ ಚುರುಮರಿ ಮಂಡಕ್ಕಿ, ಜೋಳದ ಖಡಕ್ ಬಿಸಿರೊಟ್ಟಿ, ಹೋಳಿಗೆ ಸೇರಿದಂತೆ ಬೆಳಗಾವಿ ಕುಂದಾ, ಧಾರವಾಡ ಪೇಡ, ಮೈಸೂರ್ ಪಾಕ್, ಮಂಗಳೂರು ನೀರ್ ದೋಸೆ, ಖಾರ ಬಾತ್, ಕಡಬು ಮತ್ತು ಮಾಂಸಹಾರಿ ಆಹಾರಗಳಾದ ಫ್ರಾನ್ಸ್ ಪ್ರೈ, ರೋಟಿ-ಚಿಕನ್ ಶುಕ್ಕ, ರಾಗಿ ಮುದ್ದೆ, ಚಿಕನ್ ಕರಿ, ಬಿರಿಯಾನಿ, ಫ್ರೆಶ್ ಜ್ಯೂಸ್ ಜೊತೆಗೆ ಹೊರ ರಾಜ್ಯದ ತಿನಿಸುಗಳನ್ನು 30 ವಿವಿಧ ಮಳಿಗೆಗಳಲ್ಲಿ ಸ್ಥಳದಲ್ಲೇ ತಯಾರಿಸಿಕೊಡಲಾಗುವುದು ಎಂದರು. 

ಪ್ರತಿ ದಿನ ಸಂಜೆ 6.30 ರಿಂದ 9.00 ಗಂಟೆಯವರೆಗೆ ಮೇಳದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಯೋಗದಲ್ಲಿ ಸಂಗೀತ, ನೃತ್ಯ ರೂಪಕಗಳು, ಪೆÇಲೀಸ್ ಬ್ಯಾಂಡ್ ರಾಜ್ಯದ ಪ್ರಖ್ಯಾತ ಗಾಯಕರಿಂದ ಸಾಂಸ್ಕೃತಿಕ ಸಂಜೆ ಏರ್ಪಡಿಸಲಾಗಿದೆ. 

ತರಬೇತಿ ಪ್ರತಿ ದಿನ ಬೆಳಿಗ್ಗೆ 11.30 ರಿಂದ 1.30ರವರೆಗೆ ಮಹಿಳೆಯರು ಉದ್ಯಮ ಚಟುವಟಿಕೆ ಕೈಗೊಳ್ಳಲು ಬೆಂಬಲಿಸುವ ವಿವಿಧ ತರಬೇತಿ ಹಾಗೂ ಉಪನ್ಯಾಸಗಳನ್ನು ಆಯೋಜಿಸಲಾಗಿದೆ ಎಂದ ಸಿಇಒ ಮಂಗಳೂರಿನಲ್ಲಿ ಮೊದಲನೇ ಬಾರಿಗೆ ಆಯೋಜಿಸಲಾಗುತ್ತಿರುವ ಈ ಮೇಳವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಫರೀದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಶರಣ ಪ್ರಕಾಶ್ ಆರ್ ಪಾಟೀಲ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರುಗಳು ಭಾಗವಹಿಸಲಿದ್ದಾರೆ ಎಂದರು.

ಪ್ರಮುಖವಾಗಿ ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳು ಮಾರಾಟ ಮಾಡುತ್ತಿರುವುದರಿಂದ ಹೆಚ್ಚು ಹೆಚ್ಚು ಸಾರ್ವಜನಿಕರು ಈ ಮೇಳದ ಸದುಪಯೋಗವನ್ನು ಪಡೆದುಕೊಂಡು ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚಿನ ವಹಿವಾಟಿನೊಂದಿಗೆ ಅವರ ಆರ್ಥಿಕ ಸಬಲತೆಗೆ ಬೆಂಬಲಿಸುವಲ್ಲಿ ನಾಡಿನ ಹಾಗೂ ಕರಾವಳಿಯ ಸಾರ್ವಜನಿಕರು ಕೈಜೋಡಿಸಲಿದ್ದಾರೆ ಎಂದವರು ಆಶಾವಾದ ವ್ಯಕ್ತಪಡಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಫೆಬ್ರವರಿ 20 ರಿಂದ 28ರವರೆಗೆ ಮಂಗಳೂರಿನಲ್ಲಿ ಮಹಿಳೆಯರ ಉತ್ಪನ್ನಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ Rating: 5 Reviewed By: karavali Times
Scroll to Top