ಮಂಗಳೂರು, ಫೆಬ್ರವರಿ 21, 2026 (ಕರಾವಳಿ ಟೈಮ್ಸ್) : ಕರೆನ್ಸಿ ಟ್ರೆಡಿಂಗ್ ಮತ್ತು ಷೇರು ವ್ಯವಹಾರದಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಸುಮಾರು 1.20 ಕೋಟಿ ರೂಪಾಯಿ ವಂಚಿಸಿ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಮೂಲದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರು ವಿಶ್ವನಿಧಂ ಉಪ್ಕಾರ್ ಲೇ ಔಟ್ ನಿವಾಸಿ ಅಜಯ್ ಪ್ರಸಾದ್ ಜಿ (41) ಎಂದು ಹೆಸರಿಸಲಾಗಿದೆ. ಆರೋಪಿಯ ವಿರುದ್ದ ಉಳ್ಳಾಲ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿತ್ತು.
ಆರೋಪಿ ನ್ಯಾನೋ ಫೋರೆಕ್ಸ್ ಇಂಡಿಯಾ ಎಂಬ ಸಂಸ್ಥೆಯ ಫೋರೆಕ್ಸ್ ರೋಬೋಟ್ ಸಾಫ್ಟ್ ವೇರ್ ಮೂಲಕ ಕರೆನ್ಸಿ ಟ್ರೆಡಿಂಗ್ ಮತ್ತು ಷೇರು ವ್ಯವಹಾರದಲ್ಲಿ ತಿಂಗಳಿಗೆ 40% ಲಾಭ ಹಾಗೂ 20% ಮರುಪಾವತಿ ನೀಡುವುದಾಗಿ ನಂಬಿಸಿ, ಐಡಿ ಕಾರ್ಡ್ ಮತ್ತು ದಾಖಲೆಗಳನ್ನು ನೀಡಿ ವಿಶ್ವಾಸ ಭರಿಸಿ ಫೋರೆಕ್ಸ್ ರೋಬೋಟ್ ಸಾಫ್ಟ್ ವೇರ್ ಬಳಸಲು ಅವಕಾಶ ನೀಡುವುದಾಗಿ ತಿಳಿಸಿ, ವಿವಿಧ ಗ್ರಾಹಕರಿಂದ ಸುಮಾರು 1.20 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿರುತ್ತಾನೆ. ಆದರೆ ಹಣಕ್ಕೆ ಯಾವುದೇ ಲಾಭ ಅಥವಾ ಮರುಪಾವತಿ ನೀಡದೇ, ಹಣವನ್ನು ದುರುಪಯೋಗಪಡಿಸಿ ವಂಚನೆ ನಡೆಸಿರುವುದಾಗಿದೆ. ಈ ಬಗ್ಗೆ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ 2011ನೇ ಸಾಲಿನಲ್ಲಿ 3 ಪ್ರಕರಣಗಳು ದಾಖಲಾಗಿತ್ತು.
ಈ ಪ್ರಕರಣದ ಆರೋಪಿಗಳ ಪೈಕಿ ತಲೆವರೆಸಿಕೊಂಡಿರುವ ಮತ್ತು ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟು ಅಸಾಮಿಯಾದ ಅಜಯ್ ಪ್ರಸಾದ್ ಜಿ ಎಂಬಾತನನ್ನು ಫೆಬ್ರವರಿ 20 ರಂದು ಉಳ್ಳಾಲ ಪೆÇಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ಮಂಗಳೂರು ನಗರದ 7ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.















0 comments:
Post a Comment