ಬಂಟ್ವಾಳ, ಮಾರ್ಚ್ 20, ಮಾರ್ಚ್, 2026 (ಕರಾವಳಿ ಟೈಮ್ಸ್) : ಈದ್ ಸಂಭ್ರಮದ ಹೆಸರಿನಲ್ಲಿ ಅನಾವಶ್ಯಕ ಆಡಂಬರ ಕಾರ್ಯಕ್ರಮಗಳ ಬದಲಾಗಿ ಸೃಷ್ಟಿಕರ್ತನಿಗೆ ಸಾಷ್ಟಾಂಗ ಅರ್ಪಿಸುವುದರ ಜೊತೆ ದಾನ-ಧರ್ಮಗಳನ್ನು ಹೆಚ್ಚಿಸುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಈದ್ ಸಂಭ್ರಮವನ್ನು ಇಮ್ಮಡಿಗೊಳಿಸುವಂತೆ ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಮುಸ್ಲಿಯಾರ್ ಕರೆ ನೀಡಿದರು.
29 ದಿನಗಳ ರಂಝಾನ್ ಉಪವಾಸ ಕೊನೆಗೊಳಿಸಿ ಶುಕ್ರವಾರ ಪವಿತ್ರ ಈದುಲ್-ಫಿತ್ರ್ ಹಬ್ಬದ ಹಿನ್ನಲೆಯಲ್ಲಿ ಮಸೀದಿಯಲ್ಲಿ ಶುಕ್ರವಾರ ನಡೆದ ಈದ್ ನಮಾಝ್ ಹಾಗೂ ಖುತ್ಬಾ ಪಾರಾಯಣಕ್ಕೆ ನೇತೃತ್ವ ನೀಡಿ ಮಾತನಾಡಿದ ಅವರು, ತಮ್ಮಲ್ಲಿರುವ ಸಂಪತ್ತನ್ನು ಮೋಜು-ಮಸ್ತಿಗಾಗಿ ಉಪಯೋಗಿಸದೆ ಸಮಾಜದ ಬಡ-ಬಗ್ಗರ, ಅನಾಥರ, ಅಶಕ್ತರ ಕಣ್ಣೀರೊರೆಸುವುದರ ಜೊತೆಗೆ ಸಮಾಜದ ಒಳಿತಿಗೆ ಬಳಸುವಂತಾಗಬೇಕು. ಕ್ಷಣ ಕ್ಷಣಕ್ಕೂ ಮರಣಾಧಿಕ್ಯಗೊಳ್ಳುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಸೃಷ್ಟಿಕರ್ತನು ನಮಗೆ ದೀರ್ಘಾಯುಷ್ಯ, ಆರೋಗ್ಯ ಕರುಣಿಸಿ ಅನುಗ್ರಹಿಸಿದ್ದಕ್ಕಾಗಿ ಅಲ್ಲಾಹನಿಗೆ ಸ್ತುತಿ ಅರ್ಪಿಸುವಂತಾಗಬೇಕು ಹಾಗೂ ಬಂಧು-ಮಿತ್ರರನ್ನು ಖುದ್ದಾಗಿ ಭೇಟಿಯಾಗಿ ಕಾಣುವುದರೊಂದಿಗೆ ಬಂಧುತ್ವ ವೃದ್ದಿಸುವ ಮೂಲಕ ಜೀವನದಲ್ಲಿ ಇನ್ನಷ್ಟು ಒಳಿತುಗಳನ್ನು ಮಾಡಲು ಈದ್ ಪ್ರೇರಣೆಯಾಗಬೇಕು ಎಂದರು.
ಈದುಲ್ ಫಿತ್ರ್ ವಿಶೇಷ ಪ್ರಾರ್ಥನೆ ಬಳಿಕ ಜಮಾಅತ್ ಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.































0 comments:
Post a Comment