ಬಂಟ್ವಾಳ್ಯ, ಮಾರ್ಚ್ 18, ಮಾರ್ಚ್, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ತೋಟಗಾರಿಕಾ ಸಹಾಯಕ ನಿರ್ದೇಶಕರ ಕಚೇರಿ ಆವರಣದ ಹೊರಭಾಗದಲ್ಲಿ ಪುರಸಭಾ ಕುಡಿಯುವ ನೀರಿನ ಪೈಪ್ ಒಡೆದು ದಿನವಿಡೀ ಜೀವಜಲ ಪೋಲಾಗುತ್ತಿದ್ದ ದೃಶ್ಯ ಸೋಮವಾರ ಕಂಡು ಬಂದಿದ್ದು, ಪತ್ರಿಕೆ ಈ ಬಗ್ಗೆ ಸಚಿತ್ರವಾಗಿ ಗಮನ ಸೆಳೆದ ಮರುದಿನವೇ ಪುರಸಭಾಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ.
ಇಲ್ಲಿನ ತೋಟಗಾರಿಕಾ ಇಲಾಖಾ ಕಚೇರಿಯ ಆವರಣದ ಹೊರಭಾಗದಲ್ಲಿ ಅನ್ನಪೂಣೇಶ್ವರಿ ನಗರ, ಪೊಲೀಸ್ ಲೇನ್ ಬಿ ಸಿ ರೋಡು ಎಂಬ ನಾಮಫಲಕ ಹೂಳಲಾಗಿದ್ದು, ಅದರ ಬುಡದಲ್ಲೇ ಈ ನೀರು ಪೋಲಾಗುತ್ತಿರುವ ದೃಶ್ಯ ಕಂಡು ಬಂದಿತ್ತು. ನಾಮಫಲಕ ಹೂತು ಹಾಕುವ ಸಂದರ್ಭ ಇಲ್ಲಿನ ಪೈಪಿಗೆ ಹಾನಿ ಸಂಭವಿಸಿ ಈ ನೀರು ಪೋಲಾಗುತ್ತಿತ್ತೋ ಅಥವಾ ಇನ್ಯಾವುದೇ ಕಾರಣದಿಂದ ಪೈಪ್ ಲೈನಿಗೆ ಹಾನಿ ಸಂಭವಿಸಿದೆಯೋ ಎಂಬುದು ಸರಿಯಾಗಿ ತಿಳಿದು ಬಂದಿಲ್ಲ ಎಂದು ಸ್ಥಳೀಯರು ಪತ್ರಿಕೆಯ ಗಮನ ಸೆಳೆದಿದ್ದರು. ಈ ಬಗ್ಗೆ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟ ಪುರಸಭಾಧಿಕಾರಿಗಳ ಗಮನ ಸೆಳೆದಿತ್ತು.
ವರದಿಯ ಹಿನ್ನಲೆಯಲ್ಲಿ ತಕ್ಷಣ ಸ್ಪಂದಿಸಿದ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು, ಮಂಗಳಳವಾರವೇ ಪುರಸಭಾ ಪೌರಕಾರ್ಮಿಕರನ್ನು ನಿಯೋಜಿಸಿ ಪೈಪ್ ಲೈನ್ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಪುರಸಭಾ ಮುಖ್ಯಾಧಿಕಾರಿಯವರ ತುರ್ತು ಸ್ಪಂದನೆಗೆ ಸ್ಥಳೀಯ ನಿವಾಸಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.














0 comments:
Post a Comment