ಹೆಚ್ಚುತ್ತಿರುವ ಬಿಸಿಲ ಬೇಗೆ : ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಬೇಕಿದೆ ಹೆಚ್ಚುವರಿ ವಾಹನಗಳು - Karavali Times ಹೆಚ್ಚುತ್ತಿರುವ ಬಿಸಿಲ ಬೇಗೆ : ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಬೇಕಿದೆ ಹೆಚ್ಚುವರಿ ವಾಹನಗಳು - Karavali Times

728x90

23 March 2026

ಹೆಚ್ಚುತ್ತಿರುವ ಬಿಸಿಲ ಬೇಗೆ : ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಬೇಕಿದೆ ಹೆಚ್ಚುವರಿ ವಾಹನಗಳು

 ಬಂಟ್ವಾಳ, ಮಾರ್ಚ್ 23, 2026 (ಕರಾವಳಿ ಟೈಮ್ಸ್) : ಬೇಸಿಗೆಯ ಸುಡು ಬಿಸಿಲು ಹೆಚ್ಚಾಗತೊಡಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಾರ್ಚ್ ತಿಂಗಳಲ್ಲೇ ಬಿಸಿಲ ಬೇಗೆ ವಿಪರೀತವಾಗಿರಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ರೆಡ್ ಎಲರ್ಟ್ ಘೋಷಿಸಿಯೂ ಆಗಿದೆ. ಬಿಸಿಲ ಬೇಗೆಗೆ ಅಲ್ಲಲ್ಲಿ ಬೆಂಕಿ ಆಕಸ್ಮಿಕಗಳು, ಕಾಡ್ಗಿಚ್ಚುಗಳೂ ಪದೇ ಪದೇ ಸಂಭವಿಸುತ್ತಲೇ ಇರುತ್ತದೆ. ಇಂತಹ ಅವಘಡಗಳ ಸಂದರ್ಭದಲ್ಲಿ ಜನ ತಟ್ಟನೆ ಕರೆ ಮಾಡುವುದು ಅಗ್ನಿಶಾಮಕ ಸಿಬ್ಬಂದಿಗಳಿಗೆ. ಜಿಲ್ಲೆಯಲ್ಲಿ ದೊಡ್ಡ ವ್ಯಾಪ್ತಿ ಹೊಂದಿರುವ ಬಂಟ್ವಾಳದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣವಾಗಿದ್ದರೂ ಹಲವು ಸವಾಲುಗಳನ್ನು ಎದುರಿಸುವ ಮೂಲಕ ಅಗ್ನಿ ಅವಘಡ ಸಂದರ್ಭಗಳಲ್ಲಿ ತೀವ್ರ ತೊಂದರೆಗಳು ಎದುರಾಗುತ್ತಿದೆ. 

ಬಂಟ್ವಾಳ ಅಗ್ನಿಶಾಮಕ ಠಾಣೆಯಲ್ಲಿ ಕೇವಲ ಒಂದೇ ಒಂದು ಫೈರ್ ಎಂಜಿನ್ ವಾಹನ ಇದೆ. ಸಿಬ್ಬಂದಿಗಳ ಕೊರತೆ ಸಹಿತ ಹಲವು ಸಮಸ್ಯೆಗಳು ಇಲ್ಲಿ ತಾಂಡವವಾಡುತ್ತಿದೆ. 5 ಚಾಲಕ ಹುದ್ದೆಗಳು ಖಾಲಿ ಇದ್ದು, ಸದ್ಯ ಒಬ್ಬರೇ ಚಾಲಕರಿದ್ದಾರೆ. 4 ಫೈರ್ ಮೆನ್ ಹುದ್ದೆಗಳು ಖಾಲಿ ಇದೆ. ಇಲ್ಲಿ 7 ಮಂದಿ ಫೈರ್ ಮೆನ್‍ಗಳು, 4 ಲೀಡಿಂಗ್ ಫೈರ್ ಮೆನ್‍ಗಳು, ಓರ್ವ ಆಫೀಸರ್, ಓರ್ವ ಚಾಲಕ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರ್ಷ ಬೇಸಿಗೆ ಆರಂಭವಾಗಿ ಕೇವಲ ಎರಡು ತಿಂಗಳು ಆಗುವಷ್ಟರಲ್ಲಿ ಈಗಾಗಲೇ 100 ಕರೆಗಳನ್ನು ಇಲ್ಲಿನ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಸ್ವೀಕರಿಸಿ ಆಗಿದೆ ಎಂದು ಇಲ್ಲಿನ ಅಧಿಕಾರಿ ಹರೀಶ್ ಅವರು ತಿಳಿಸುತ್ತಾರೆ. 

ಬಂಟ್ವಾಳ ಅಗ್ನಿಶಾಮಕ ಠಾಣೆಯ ವಾಹನ ಕೊರತೆ, ಸಿಬ್ಬಂದಿ ಕೊರತೆಯಿಂದಾಗಿ ತುರ್ತು ಸಂದರ್ಭಗಳಲ್ಲಿ ತೀವ್ರ ಪರದಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಒಂದೇ ಒಂದು ವಾಹನ ಇರುವುದರಿಂದ ಒಂದಕ್ಕಿಂತ ಹೆಚ್ಚು ಕಡೆ ಅನಾಹುತಗಳು ಏಕ ಕಾಲದಲ್ಲಿ ಸಂಭವಿಸಿದರೆ ತುರ್ತು ಸ್ಪಂದನೆಗೆ ತೀವ್ರ ಅನಾನುಕೂಲವಾಗಲಿದೆ. ಠಾಣೆಗೆ ತುರ್ತಾಗಿ ಹೆಚ್ಚುವರಿ ವಾಹನದ ವ್ಯವಸ್ಥೆ ಶೀಘ್ರದಲ್ಲಿ ಆಗಬೇಕಾಗಿದೆ. ಒಂದು ಕರೆ ಸ್ವೀಕರಿಸಿ ಅಲ್ಲಿನ ಸರ್ವಿಸ್ ಮುಗಿಸಿ ಬರುವುದಕ್ಕೆ ಕನಿಷ್ಠ ಎಂದರೂ ನಾಲ್ಕೈದು ಗಂಟೆಗಳ ಸಮಯಾವಕಾಶ ಬೇಕಾಗಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಹೆಚ್ಚುವರಿ ಅನಾಹುತಗಳ ಕರೆ ಬಂದರೆ ಸ್ಪಂದಿಸುವುದೇ ಕಷ್ಟ ಸಾಧ್ಯ ಎಂಬಂತಾಗಿದೆ. ಬೇಸಿಗೆ ಕಾಲದಲ್ಲಿ ಬೆಂಕಿ ಅವಘಡ, ಕಾಡ್ಗಿಚ್ಚಿನ ನಿಬಿಡತೆಯಾದರೆ ಮಳೆಗಾಲ ಬಂತೆಂದರೆ ನೆರೆ, ಪ್ರವಾಹಗಳ ತುರ್ತು. ಇದಲ್ಲದೆ ಎಲ್ಲ ಸಮಯಗಳಲ್ಲೂ ನದಿ, ಕೆರೆ, ಬಾವಿ ಅವಘಡಗಳೂ ಹಲವು ಬಾರಿ ಸಂಭವಿಸುತ್ತಲೇ ಇರುತ್ತದೆ. ಇಂತಹ ಸಂದರ್ಭಗಳಲ್ಲೂ ಅಗ್ನಿಶಾಮಕ ಸಿಬ್ಬಂದಿಗಳ ಹಾಜರಾತಿ ಅಲ್ಲಿಗೆ ಕಡ್ಡಾಯವಾಗಿ ಬೇಕಾಗಿದೆ. ಇದರಿಂದಾಗಿ ಮಂಗಳೂರು, ಮೂಡಬಿದ್ರೆ, ಬೆಳ್ತಂಗಡಿ, ಪುತ್ತೂರು  ಠಾಣೆಗಳ ವಾಹನಗಳನ್ನೂ ಕೆಲವೊಮ್ಮೆ ಇಲ್ಲಿಗೆ ಹೆಚ್ಚುವರಿಯಾಗಿ ಕರೆಸಿದ್ದೂ ಇದೆ. 

ತುರ್ತು ಸಂದರ್ಭಗಳಲ್ಲಿ ಠಾಣೆಯಲ್ಲಿ ವಾಹನ, ಸಿಬ್ಬಂದಿಗಳೇ ಇಲ್ಲದಿರುವಾಗ ಕರೆಗಳನ್ನು ಸ್ವೀಕರಿಸುವುದು ಕೂಡಾ ಇಲ್ಲಿನ ಅಧಿಕಾರಿ-ಸಿಬ್ಬಂದಿಗಳಿಗೆ ಸವಾಲಾಗಿ ಪರಿಣಮಿಸುತ್ತಿದೆ. ಕರೆ ಸ್ವೀಕರಿಸದಿದ್ದಲ್ಲಿ ಬೇಜವಾಬ್ದಾರಿತನದ ಪಟ್ಟ ಒಂದು ಕಡೆಯಾದರೆ, ಕರೆ ಸ್ವೀಕರಿಸಿದರೆ ಸ್ಪಂದಿಸಲಾಗದ ಅಡಕತ್ತರಿಯ ಪರಿಸ್ಥಿತಿ ಇಲ್ಲಿನ ಠಾಣಾ ಅಧಿಕಾರಿ-ಸಿಬ್ಬಂದಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದಂತೂ ಸತ್ಯ.

ಬಂಟ್ವಾಳ ಅಗ್ನಿಶಾಮಕ ಠಾಣೆಯ ವ್ಯಾಪ್ತಿಯೂ ವಿಶಾಲವಾಗಿದ್ದು, ವಿಟ್ಲ, ವಾಮದಪದವು, ಸಿದ್ದಕಟ್ಟೆ, ಪೂಂಜಾಲಕಟ್ಟೆ, ಕಾರಿಂಜ, ವಿಟ್ಲ, ಕನ್ಯಾನ, ಫರಂಗಿಪೇಟೆ ಸಹಿತ ಹಲವು ಪ್ರದೇಶಗಳನ್ನು ಒಳಗೊಂಡಿರುವುದೇ ಅಲ್ಲದೆ ಕಳಂಜಿಮಲೆ, ಕಾರಿಂಜಗಳಂತಹ ಗುಡ್ಡ ಪ್ರದೇಶಗಳೂ ಒಳಪಡುವುದರಿಂದ ಗುಡ್ಡ ಪ್ರದೇಶಗಳಲ್ಲಿ ಪದೇ ಪದೇ ಸಂಭವಿಸುವ ಕಾಡ್ಗಿಚ್ಚಿನ ಸಂದರ್ಭಗಳಲ್ಲಿ ಸ್ಥಳಕ್ಕೆ ತಲುಪಲು ಸಾಕಷ್ಟು ಸಮಯಾವಕಾಶಗಳೂ ಬೇಕಾಗಿ ಬರಲಿದೆ. 

ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಹೆಚ್ಚುವರಿ ವಾಹನ ಸಹಿತ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಒದಗಿಸಿಕೊಟ್ಟರೆ ಅವಘಡ ಸಂದರ್ಭ ಉಂಟಾಗುವ ಹಾನಿಯನ್ನು ಸಾಕಷ್ಟು ಪ್ರಮಾಣದಲ್ಲಿ ತಪ್ಪಿಸಬಹುದು. ಅವಘಡ ಸಂದರ್ಭ ಉಂಟಾಗುವ ಹೆಚ್ಚಿನ ಅನಾಹುತಗಳಿಗೆ ಅಗ್ನಿ ಶಾಮಕ ಅಧಿಕಾರಿ-ಸಿಬ್ಬಂದಿಗಳ ಮೇಲೆ ಗೂಬೆ ಕೂರಿಸುವುದಕ್ಕಿಂತ ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಈ ಬಗ್ಗೆ ಗಮನ ಸೆಳೆದು ಇಲ್ಲಿನ ಅಗ್ನಿಶಾಮಕ ಠಾಣೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇದು ಬಂಟ್ವಾಳ ಠಾಣೆಯೊಂದರ ಕಥೆಯಲ್ಲ. ರಾಜ್ಯಾದ್ಯಂತ ಇರುವ ಅಗ್ನಿಶಾಮಕ ಠಾಣೆಗಳದ್ದೂ ಇದೇ ಪರಿಸ್ಥಿತಿ ಇದೆ ಎನ್ನಲಾಗಿದ್ದು, ಈ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಹೆಚ್ಚುತ್ತಿರುವ ಬಿಸಿಲ ಬೇಗೆ : ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಬೇಕಿದೆ ಹೆಚ್ಚುವರಿ ವಾಹನಗಳು Rating: 5 Reviewed By: karavali Times
Scroll to Top