ಬಂಟ್ವಾಳ, ಎಪ್ರಿಲ್ 11, 2026 (ಕರಾವಳಿ ಟೈಮ್ಸ್) : ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐ ಎಫ್ ಎ) ಸಂಸ್ಥೆಯ ಆರ್ಕೈವ್ ಮತ್ತು ಮ್ಯೂಸಿಯಮ್ಸ್ ಕಾರ್ಯಕ್ರಮದಡಿಯಲ್ಲಿ ಬಿ ಸಿ ರೋಡು ಸಮೀಪದ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರದ ಹಾಗೂ ಟಾಟಾ ಟ್ರಸ್ಟ್ ಸಹಯೋಗದಲ್ಲಿ ತುಳುನಾಡಿನ ಸಂಸ್ಕೃತಿ, ಜೀವನಶೈಲಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ “ಹಸಿರು ಹೊದಿಕೆಯಡಿ ತುಳು ಜೀವನದ ಸಾಂಸ್ಕೃತಿಕ ಪರಂಪರೆ” ಎಂಬ ವಿಶೇಷ ವಸ್ತು ಪ್ರದರ್ಶನ ಎಪ್ರಿಲ್ 11 ರಿಂದ ಆರಂಭಗೊಂಡಿದ್ದು, ಮುಂದಿನ ಒಂದು ತಿಂಗಳ ಕಾಲ ಆಯೋಜಿಸಲಾಗಿದೆ ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸ್ಥಾಪಕ ಪೆÇ್ರ ತುಕಾರಾಂ ಪೂಜಾರಿ ಹೇಳಿದರು.
ಶನಿವಾರ ಸಂಜೆ ಕೇಂದ್ರದ ಸಭಾಂಗಣದಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, 1995ರಲ್ಲಿ ಸ್ಥಾಪನೆಗೊಂದ ಈ ಸಂಗ್ರಹಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಯಾಗಿದ್ದು, ತುಳುನಾಡಿನ ಸಾಂಪ್ರದಾಯಿಕ ಜೀವನ ಶೈಲಿಯನ್ನು ಜೀವಂತವಾಗಿ ಪರಿಚಯಿಸುವ ಸಮಗ್ರ ಅನುಭವವನ್ನು ನೀಡುತ್ತಿದೆ. ಇಲ್ಲಿ ಪುರಾತನ ಕೃಷಿ ಉಪಕರಣಗಳು, ಮನೆ ಬಳಕೆಯ ವಸ್ತುಗಳು, ಜನಪದ ಕಲಾಕೃತಿಗಳು ಹಾಗೂ ಆಚರಣೆಗಳಿಗೆ ಸಂಬಂಧಿಸಿದ ಅಪರೂಪದ ಸಂಗ್ರಹಗಳು ಸಂರಕ್ಷಿಸಲ್ಪಟ್ಟಿವೆ.
ಈ ಬಾರಿ, ಮ್ಯೂಸಿಯಂ ವಿನ್ಯಾಸಕಾರರಾದ ಮಧುಶ್ರೀ ಕಾಮಕ್ ಮತ್ತು ಬ್ರಿಯಾನ್ ನೆಜಿಲ್ ಡಿ ಸೋಜಾ ಅವರ ನೇತೃತ್ವದಲ್ಲಿ ಐ ಎಫ್ ಎ ಹಾಗೂ ಟಾಟಾ ಟ್ರಸ್ಟ್ ನೆರವಿನಲ್ಲಿ ಈ ವಿಶೇಷ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಪ್ರದರ್ಶನದಲ್ಲಿ ತುಳು ಜನರ ಜೀವನ ಚಕ್ರವನ್ನು ಪ್ರತಿಬಿಂಬಿಸುವ ಹತ್ತು ಪ್ರಮುಖ ವಸ್ತುಗಳನ್ನು ಆಯ್ಕೆ ಮಾಡಲಾಗಿದೆ. ಹುಟ್ಟಿನಿಂದ ಅಂತ್ಯ ಕ್ರಿಯೆಗಳವರೆಗೆ ನಡೆಯುವ ಆಚರಣೆಗಳು ಮತ್ತು ದೈನಂದಿನ ಬದುಕಿನ ಅಂಶಗಳನ್ನು ನೋಡುಗರಿಗೆ ಪರಿಚಯಿಸಲಾಗುತ್ತದೆ ಎಂದರು.
ಐ ಎಫ್ ಎ ಕಾರ್ಯಕ್ರಮ ಸಂಯೋಜಕಿ ರುತ್ವಿಕಾ ಮಿಶ್ರಾ ಮಾತನಾಡಿ, ಇಂದಿನ ಮಕ್ಕಳು ಈ ಪ್ರದರ್ಶನದ ಜೊತೆ ಜೋಡಿಸಿಕೊಂಡು ಇದರ ಸದುಪಯೋಗ ಪಡಿಸಿಕೊಂಡಾಗ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿದೆ ಎಂದರು.
ಐ ಎಫ್ ಎ ಗ್ರ್ಯಾಂಟಿಗಳಾದ ಮಧುಶ್ರೀ ಕಾಮಕ್ ಹಾಗೂ ಬ್ರಿಯಾನ್ ನೆಜಿಲ್ ಡಿ’ಸೋಜಾ ಮಾತನಾಡಿ, ಮರದ ತೊಟ್ಟಿಲು, ತೆಂಗಿನಕಾಯಿ ಗೆರಟೆಯಿಂದ ತಯಾರಿಸಿದ ಉಪಕರಣಗಳು ಹಾಗೂ ವಿವಿಧ ಆಚರಣಾತ್ಮಕ ವಸ್ತುಗಳು ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ. ಈ ವಸ್ತುಗಳು ತುಳುನಾಡಿನ ಸಂಪ್ರದಾಯ, ಜೀವನೋಪಾಯ ಹಾಗೂ ಪರಿಸರ ಜ್ಞಾನವನ್ನು ಪ್ರತಿಬಿಂಬಿಸುತ್ತವೆ ಎಂದರು.
ರಾಣಿ ಅಬ್ಬಕ್ಕ ತುಳು ಬದುಕು ವಸ್ತು ಸಂಗ್ರಹಾಲಯದ ಕಾರ್ಯದರ್ಶಿ ಡಾ ಆಶಾಲತಾ ಸುವರ್ಣ, ಕು ಸಿಂಧೂರ, ಪಲ್ಲವಿ, ದಾಮೋದರ ಸಂಚಯಗಿರಿ ಸುದ್ದಿಗೋಷ್ಠಿಯಲ್ಲಿದ್ದರು.



























0 comments:
Post a Comment